Thursday, September 25, 2025

ಮದ್ಯ ಮಾರಾಟ ಲೈಸೆನ್ಸ್‌ ಹರಾಜಿಗೆ ಮುಂದಾದ ಸರ್ಕಾರ: 500 ಕೋಟಿ ಆದಾಯ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಆರ್ಥಿಕ ನಷ್ಟಗಳ ನಡುವೆಯೂ ರಾಜ್ಯ ಸರ್ಕಾರ ಹೆಚ್ಚುವರಿ ಆದಾಯವನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದು, ಬಳಕೆಯಲ್ಲಿಲ್ಲದ ಅಬಕಾರಿ ಪರವಾನಗಿಗಳನ್ನು ಹರಾಜು ಹಾಕುವ ಮೂಲಕ ಮಾರಾಟ ಮಾಡಲು ಆರ್ಥಿಕ ಇಲಾಖೆ ನಿರ್ಧರಿಸಿದೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸುಮಾರು 500 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ಈ ಹರಾಜು ಸಿಎಲ್-2 (ಚಿಲ್ಲರೆ ಮದ್ಯ ಮಳಿಗೆ) ಮತ್ತು ಸಿಎಲ್-9 (ಬಾರ್ ಮತ್ತು ರೆಸ್ಟೊರೆಂಟ್) ಪರವಾನಗಿಗಳಿಗೆ ಮಾತ್ರವಲ್ಲದೆ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ ನಡೆಸುವ ಸಿಎಲ್-11ಸಿ ಪರವಾನಗಿಗಳಿಗೂ ಅನ್ವಯಿಸುತ್ತದೆ.

ಅಬಕಾರಿ ಕಚೇರಿಯ ಪ್ರಕಾರ, ಒಟ್ಟು 579 ಪರವಾನಗಿಗಳನ್ನು ಆನ್‌ಲೈನ್ ಹರಾಜು ಮೂಲಕ ಮಾರಾಟ ಮಾಡಲಾಗಲಿದೆ. ಹೆಚ್ಚುವರಿ ಬಿಡ್ ಸಲ್ಲಿಸಿದವರಿಗೆ ಮಾತ್ರ ಪರವಾನಗಿ ನೀಡಲಾಗುತ್ತದೆ. 1992 ರಿಂದ ಹೊಸ ಸಿಎಲ್-2 ಮತ್ತು ಸಿಎಲ್-9 ಪರವಾನಗಿಗಳನ್ನು ನೀಡದಿರುವುದರಿಂದ ಈ ಹರಾಜಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಸ್ತುತ ಸಿಎಲ್-2 ಪರವಾನಗಿಗಳಿಗೆ ವಾರ್ಷಿಕ 4-6 ಲಕ್ಷ ರೂ. ಮತ್ತು ಸಿಎಲ್-9 ಪರವಾನಗಿಗಳಿಗೆ 4-7.5 ಲಕ್ಷ ರೂ. ಶುಲ್ಕ ವಿಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಪರವಾನಗಿಯನ್ನು 3.8 ಕೋಟಿ ರೂ.ವರೆಗೆ ಮಾರಾಟ ಮಾಡಬಹುದು. ಹರಾಜಿನಲ್ಲಿ, ಪ್ರತಿಯೊಂದು ಪರವಾನಗಿಗೆ ಸರಾಸರಿ 3 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ, ಹಾಗೆಯೇ ರಾಜ್ಯದ ಇತರ ಭಾಗಗಳಲ್ಲಿ ಇದು 1 ಕೋಟಿ ರೂ. ವರೆಗೆ ಇರಲಿದೆ.

ಹೊಸ ನಿಯಮಗಳ ಪ್ರಕಾರ, ಪರವಾನಗಿ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಬೇಕು, ಅಗತ್ಯ ದಾಖಲೆಗಳನ್ನು ಜಮಾ ಮಾಡಬೇಕು ಹಾಗೂ ಹರಾಜಿನಲ್ಲಿ ಭಾಗವಹಿಸಲು ಒಂದು ನಿರ್ದಿಷ್ಟ ಮೊತ್ತದ ಠೇವಣಿ ಇಡಬೇಕು. ಯಾರು ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ಪರವಾನಗಿ ಸಿಗುತ್ತದೆ.

ಇದನ್ನೂ ಓದಿ