Friday, September 26, 2025

ನಿಷ್ಠಾವಂತ ಕಾರ್ಯಕರ್ತರೇ ಬಿಜೆಪಿ ಪಕ್ಷದ ಜೀವಾಳ: ಮಾಜಿ ಶಾಸಕ ಪ್ರೀತಮ್‌ಗೌಡ

ಹೊಸದಿಗಂತ ಚಿತ್ರದುರ್ಗ


ದೇಶದಲ್ಲಿರುವ ಹಲವು ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣದಿಂದ ಕೂಡಿವೆ. ಇಂತಹ ಪಕ್ಷಗಳ ವರಿಷ್ಠರು ತಮ್ಮ ಕುಟುಂಬದವರಿಗೆ ಹೆಚ್ಚಿನ ಸ್ಥಾನಮಾನ ನೀಡುತ್ತಿದ್ದಾರೆ. ಆದರೆ ಬಿಜೆಪಿ ಪ್ರತಿ ಮೂರು ವರ್ಷಕ್ಕೆ ಭೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಚುನಾವಣೆ ಅಥವಾ ನೇಮಕಾತಿ ಮೂಲಕ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹಾಸನದ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ತಿಳಿಸಿದರು.


ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನ ಸಂಘದ ನೇತಾರ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಯಂತಿ ಹಾಗೂ ಆತ್ಮನಿರ್ಭರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಬೇರೆ ಪಕ್ಷದವರಂತೆ ಕುಟುಂಬದವರನ್ನು ನೇಮಕ ಮಾಡುವ ಪರಿಪಾಠ ಇಲ್ಲಿಲ್ಲ. ಎಲ್ಲವೂ ಪಕ್ಷದ ಆದೇಶದಂತೆ ನಡೆಯುತ್ತದೆ. ಕುಟುಂಬ ರಾಜಕಾರಣಕ್ಕೆ ಮಾನ್ಯತೆ ಇಲ್ಲ. ಪಕ್ಷದ ಕಾರ್ಯಕತರೇ ಮುಖ್ಯ ಎಂದರು.


ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಜೀವಾಳ. ದೇಶದ ಹಲವಾರು ರಾಜ್ಯಗಳಲ್ಲಿ ಇರುವ ರಾಜಕೀಯ ಪಕ್ಷಗಳಲ್ಲಿ ಯಾವುದಾದರೂ ಉನ್ನತ ಹುದ್ದೆ ನೇಮಕವಾಗಬೇಕಾದರೆ ಅಲ್ಲಿ ಅವರು ಕುಟುಂಬದರನ್ನು ನೇಮಕ ಮಾಡುತ್ತಾರೆ. ಇದು ಕುಟುಂಬ ರಾಜಕಾರಣವಾಗುತ್ತದೆ. ಆದರೆ ನಮ್ಮಲ್ಲಿ ಈ ರೀತಿಯಾದ ಪದ್ಧತಿ ಇಲ್ಲ. ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಪರಿಗಣಿಸುವ ಮೂಲಕ ಎಲ್ಲ ಹುದ್ದೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.


ಮುಂದಿನ ದಿನದಲ್ಲಿ ಪಕ್ಷ ಕಾರ್ಯಕರ್ತರ ಚುನಾವಣೆಯಾದ ಜಿ.ಪಂ., ತಾ.ಪಂ., ನಗರಸಭೆಯ ಚುನಾವಣೆಗಳು ಬರಲಿವೆ. ಈ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಈಗಿನಿಂದಲೇ ಜನರ ವಿಶ್ವಾಸ ಗಳಿಸುವ ಕಾರ್ಯ ಮಾಡಬೇಕಿದೆ. ಅವರ ಕಷ್ಟಗಳಿಗೆ ಭಾಗಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ. ಇದು ಮುಂದಿನ ದಿನದಲ್ಲಿ ಉಪಯೋಗಕ್ಕೆ ಬರಲಿದೆ ಎಂದು ಪ್ರೀತಮ್ ಗೌಡ ತಿಳಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಶಾಸಕ ಡಾ.ಎಂ..ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನೇರಲಗುಂಟೆ ಎಸ್.ತಿಪ್ಪೇಸ್ವಾಮಿ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮಾಜಿ ಅಧ್ಯಕ್ಷರಾದ ಹನುಮಂತೇಗೌಡ, ಎ.ಮುರಳಿ, ಮುಖಂಡರಾದ ಲಕ್ಷ್ಮೀಕಾಂತ್, ರಾಮದಾಸ್, ಅನಿಲ್ ಕುಮಾರ್ ಭಾಗವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಬೈರಪ್ಪ ನಿಧನದ ಹಿನ್ನೆಲೆಯಲ್ಲಿ ಮೌನಾಚರಣೆ ನಡೆಸಲಾಯಿತು.


ಇದಕ್ಕೂ ಮುನ್ನಾ ಜನ ಸಂಘದ ನೇತಾರ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜಯಂತಿಯ ಅಂಗವಾಗಿ ನಗರದ ಎಂ.ಕೆ.ಪ್ಯಾಲೇಸ್ ಹಿಂಬಾಗ ತ್ರಿಶೂಲಾಂಜನೇಯ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಇದನ್ನೂ ಓದಿ