Friday, September 26, 2025

ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಅಪಘಾತ: ಹೊಲಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ಕಾರಿ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು 8 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ರಾಯಚೂರಿನ ಹೊರವಲಯದ ಸಾಥಮೈಲ್ ಕ್ರಾಸ್ ಹತ್ತಿರ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಬಸ್ ಇದಾಗಿದೆ. ಏಕಾಏಕಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ಬಸ್​ ಅನ್ನು ಎಡಕ್ಕೆ ತಿರುಗಿಸಿದ್ದಾನೆ. ಆಗ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ 16 ಜನರಿದ್ದರು.

ಬಸ್ ಪಲ್ಟಿಯಿಂದ ಬಸ್​ನಲ್ಲಿ ಓರ್ವ ಪ್ರಯಾಣಿಕನ ಕಾಲು ಸಿಲುಕಿ ಒದ್ದಾಡಿದ್ದಾನೆ. ಪೊಲೀಸರು, ಸ್ಥಳೀಯರ ಸಹಾಯದಿಂದ ಪ್ರಯಾಣಿಕನನ್ನು ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

ಅಲ್ಲದೇ‌ ಬಸ್‌ನಲ್ಲಿದ್ದ ಸುಮಾರು 8 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ