Friday, September 26, 2025

ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಇದೆ : ಅರವಿಂದ ಬೆಲ್ಲದ

ಹೊಸದಿಗಂತ ವರದಿ ಹುಬ್ಬಳ್ಳಿ :

ಕರ್ನಾಟಕದ ಯುವಕರ ಆಕ್ರೋಶ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ನೇಪಾಳದ ಜನರೇಷನ್ ಝಡ್ ಪ್ರತಿಭಟನೆಯಂತೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡದ, ಲೂಟಿಕೋರ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳು ಧಾರವಾಡದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದು, ಅವರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ವಿರೋಧ ಪಕ್ಷದ ಉಪ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಭಾರತದ ಅತ್ಯಂತ ಕಡಿಮೆ ವಯಸ್ಸಿನ ಮಿತಿ ಕರ್ನಾಟಕದಲ್ಲಿದೆ. (ಸಾಮಾನ್ಯರಿಗೆ ೨೫, ಮೀಸಲಾತಿ ವರ್ಗಕ್ಕೆ ೨೭) ಇದ್ದರೆ, ಇತರ ರಾಜ್ಯಗಳು ೩೦-೩೩ (ಸಾಮಾನ್ಯ) ಮತ್ತು ೩೫+ (ಎಸ್‌ಸಿ/ಎಸ್‌ಟಿ) ವರ್ಷಗಳನ್ನು ಅವಕಾಶ ಮಾಡಿಕೊಡುತ್ತವೆ. ಈ ಯುವ ಸಮುದಾಯದ ಜೊತೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಇಲ್ಲಿನ ವಿದ್ಯಾರ್ಥಿಗಳ ಕಷ್ಟವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಕುರಿತು ಕಳೆದ ಅಧಿವೇಶನದಲ್ಲೂ ಧ್ವನಿ ಎತ್ತಿ ಸರ್ಕಾರವನ್ನು ಎಚ್ಚರಿಸಿದೆ, ಆದರೆ ಈ ದಪ್ಪ ಚರ್ಮದ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕಿಚ್ಚು ದೊಡ್ಡ ರೂಪ ತಾಳುವ ಮೊದಲು, ಬಡ ವಿದ್ಯಾರ್ಥಿಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಇಲ್ಲವಾದರೆ ನೇಪಾಳದ ಭ್ರಷ್ಟ ಸರ್ಕಾರದ ಮಂತ್ರಿಗಳಿಗೆ ಆದ ಗತಿಯೇ ಅವರ ಸರ್ಕಾರದ ಮಂತ್ರಿಗಳಿಗೂ ಮತ್ತು ಅವರಿಗೂ ಎದುರಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಯುವ ಜನತೆಯ ಆಕ್ರೋಶವನ್ನು ಕಾಂಗ್ರೆಸ್ ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಅವರು ತಿಳಿಸಿದರು.

ಇದನ್ನೂ ಓದಿ