ಹೊಸದಿಗಂತ ವರದಿ ಚಿತ್ರದುರ್ಗ:
ಕೇಂದ್ರ ಸರ್ಕಾರದ ಸಚಿವ ಸಂಪುಟವು ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯನ್ನು ಸೇರ್ಪಡೆ ಮಾಡಿ, 100 ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಭಾರತ ಸರ್ಕಾರವು ತನ್ನ 2025-26ರ ಕೇಂದ್ರ ಬಜೆಟ್‌ನಲ್ಲಿ 2025-26ರಿಂದ ಪ್ರಾರಂಭಿಸಿ ಆರು ವರ್ಷಗಳ ಅವಧಿಗೆ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಅಡಿಯಲ್ಲಿ 100 ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿತ್ತು. ಈ ಯೋಜನೆಯು ಅಕ್ಟೋಬರ್ ತಿಂಗಳಲ್ಲಿ ಅಧಿಕೃತವಾಗಿ ಚಾಲನೆಯನ್ನು ಪಡೆಯಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಯು ದೇಶಾದ್ಯಂತ 100 ಜಿಲ್ಲೆಗಳಲ್ಲಿ 1.7 ಕೋಟಿ ರೈತರಿಗೆ ಉಪಯೋಗವಾಗಲಿದೆ. ಈ ಯೋಜನೆಯು 2025-26 ರಿಂದ 2030-31ರವರೆಗೆ ಒಟ್ಟು 6 ವರ್ಷಗಳ ಯೋಜನೆಯಾಗಿದೆ. ಪ್ರತಿ ವರ್ಷ 24 ಸಾವಿರ ಕೋಟಿಯಂತೆ ಒಟ್ಟು 1.44 ಲಕ್ಷ ಕೋಟಿ ಅನುದಾನವನ್ನು ಈ ಯೋಜನೆಗಾಗಿ ಒದಗಿಸಲಾಗುತ್ತದೆ.
ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಭಾರತೀಯ ಕೃಷಿಯನ್ನು ರೈತರಿಗೆ ಹೆಚ್ಚು ಉತ್ಪಾದಕ, ಸುಸ್ಥಿರ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿಸುವ ಮೂಲಕ ಕ್ರಾಂತಿಕಾರಿಗೊಳಿಸಲು ಪ್ರಾರಂಭಿಸಲಾದ ಒಂದು ಪರಿವರ್ತನಾಶೀಲ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ ಕಡಿಮೆ ಬೆಳೆ ಇಳುವರಿ, ನೀರಿನ ಕೊರತೆ ಮತ್ತು ಸಂಪನ್ಮೂಲ ಸೀಮಿತ ಪ್ರದೇಶದಂತಹ ಸವಾಲುಗಳನ್ನು ಎದುರಿಸುತ್ತಿರುವ 100 ಕಳಪೆ ಪ್ರದರ್ಶನ ನೀಡುವ ಜಿಲ್ಲೆಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಯಿನಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ 11 ಸಚಿವಾಲಯಗಳಲ್ಲಿ ಅಸ್ತಿತ್ವದಲ್ಲಿರುವ 36 ಕೃಷಿ ಯೋಜನೆಗಳನ್ನು ಒಟ್ಟುಗೂಡಿಸಿ, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ.
ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸಲು, ಆಹಾರ ಪದ್ಧತಿಯನ್ನು ಖಚಿತ ಪಡಿಸಿಕೊಳ್ಳಲು ಮತ್ತು ಸ್ವಾವಲಂಬಿ ಭಾರತವಾದ ಆತ್ಮ ನಿರ್ಭರ ಭಾರತವನ್ನು ಮುನ್ನಡೆಸಲು ಸಹಕಾರಿಯಾಗಲಿದೆ. ಸುಸ್ಥಿರ ಕೃಷಿಯ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ಬಡತನ ಮುಕ್ತ ಭಾರತ ನಿರ್ಮಿಸಲು ಈ ಯೋಜನೆ ಮೂಲಾಧಾರವಾಗಿದೆ.
ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ ಚಿತ್ರದುರ್ಗ ಸೇರ್ಪಡೆ: ಕಾರಜೋಳ
