Saturday, September 27, 2025

ಯಾರೇ ತೊಂದರೆ ಮಾಡಿದರೂ ಯೋಜನೆ ನಿಲ್ಲುವುದಿಲ್ಲ: ‘ಕಾವೇರಿ ಆರತಿ’ಗೆ ಡಿ.ಕೆ. ಶಿವಕುಮಾರ್ ಚಾಲನೆ

ಹೊಸದಿಗಂತ ವರದಿ, ಮಂಡ್ಯ :

ಕಾವೇರಿ ಆರತಿಗೆ ಯಾರೇ ತೊಂದರೆ ಮಾಡಿದರೂ, ಯೋಜನೆ ನಿಲ್ಲುವುದಿಲ್ಲ. ಪ್ರಾರ್ಥನೆ ಯಾರ ಮನೆಯ ಆಸ್ತಿ ಅಲ್ಲ. ನಾವು ಕಾವೇರಿ ಆರತಿ ಯೋಜನೆಯನ್ನು ಅಂದುಕೊಂಡ ರೀತಿಯಲ್ಲೇ ಅನುಷ್ಠಾನಗೊಳಿಸುವುದು ಶತಃಸಿದ್ಧ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಟ್ಟವಾಗಿ ನುಡಿದರು.

ಕೃಷ್ಣರಾಜಸಾಗರದ ಬೃಂದಾವನದಲ್ಲಿ ಆಯೋಜಿಸಿದ್ದ ಮೊದಲನೇ ಕಾವೇರಿ ಆರತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷದಿಂದಲೇ ವಾರಕ್ಕೆ ಮೂರು ದಿನಗಳ ಕಾಲ ಕಾವೇರಿ ಆರತಿ ಯೋಜನೆಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಇದನ್ನು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ರೂಪಿಸದೆ ರಾಜ್ಯ ಮತ್ತು ಹೊರ ರಾಜ್ಯದಿಂದ ನಿತ್ಯ ಹತ್ತು ಸಾವಿರ ಜನರು ಬಂದು ವೀಕ್ಷಣೆ ಮಾಡುವಂತೆ ಆಯೋಜನೆ ಮಾಡಿ ಪ್ರವಾಸೋಧ್ಯಮ ದೃಷ್ಠಿಯಂದ ಕೆ.ಆರ್.ಎಸ್.ನ್ನು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಅದನ್ನು ದೊಡ್ಡ ಮಟ್ಟದಲ್ಲಿ ಜಾರಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಈ ವರ್ಷ ಕಾವೇರಿ ಆರತಿಯನ್ನು ಕೇವಲ ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಉದ್ದೇಶಿತ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುತ್ತೇವೆ ಎಂದು ಖಚಿತವಾಗಿ ಹೇಳಿದರು.

ಕಾವೇರಿ ಜ್ಯೋತಿ ಕರುನಾಡಿನಲ್ಲಿ ಶಾಶ್ವತವಾಗಿ ಬೆಳಗಬೇಕು. ಆ ತಾಯಿಯ ಆಶೀರ್ವಾದಿಂದ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಜಾರಿಗೊಳಿಸುವ ಶಕ್ತಿಯನ್ನು ಕಾವೇರಿ ತಾಯಿ ಕರುಣಿಸುವ ನಿರೀಕ್ಷೆಯೊಂದಿಗೆ ಕಾವೇರಿ ಆರತಿಯನ್ನು ಆರಂಭಿಸಿದ್ದೇವೆ. ನಮ್ಮ ಪ್ರಯತ್ನ ವಿಫಲವಾಗಬಹುದು. ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ ಎಂಬ ಆಶಾ ಭಾವನೆ ನಮ್ಮದಾಗಿದೆ ಎಂದು ಹೇಳಿದರು.