ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಅಕ್ರಮಗಳ ಆರೋಪ ಸಂಬಂಧ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ತನಿಖೆಯ ಈ ಹಂತದಲ್ಲಿ ಆರೋಪಗಳ ಸ್ವರೂಪವು ಕಸ್ಟಡಿ ವಿಚಾರಣೆಗೆ ಅರ್ಹವಾಗಿದೆ ಎಂದು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.
ಸಂಸ್ಥೆಯಲ್ಲಿನ ಹಾಸ್ಟೆಲ್‌ಗಳಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳು, ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶಗಳು, ತಡರಾತ್ರಿ ವಾಟ್ಸಾಪ್ ಚಾಟ್‌ಗಳು ಮತ್ತು ವಿದೇಶ ಪ್ರವಾಸದ ಭರವಸೆ ನೀಡಿ ಶೋಷಣೆ ಇಂತಹ ಆಘಾತಕಾರಿ ಆರೋಪಗಳು ಹೊರಬಿದ್ದಿವೆ.
ಆಗಸ್ಟ್ 2025ರಲ್ಲಿ ಒಟ್ಟು 17 ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಲೈಂಗಿಕ ಕಿರುಕುಳದ ವಿರುದ್ಧ ದೂರು ಸಲ್ಲಿಸಿದ್ದಾರೆ. ಚೈತನ್ಯಾನಂದ ಹಾಸ್ಟೆಲ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಸ್ನಾನಗೃಹಗಳ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ದೃಶ್ಯಗಳನ್ನು ದುರುಪಯೋಗ ಮಾಡಲಾಗುತ್ತಿತ್ತು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಪ್ರಸ್ತುತ 62 ವರ್ಷದ ಚೈತನ್ಯಾನಂದ ಸರಸ್ವತಿ ತಲೆಮರೆಸಿಕೊಂಡಿದ್ದಾರೆ. ದೆಹಲಿ ಪೊಲೀಸರು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.