ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳು ನಟ-ರಾಜಕಾರಣಿ ವಿಜಯ್ ದಳಪತಿಯವರ ರ‍್ಯಾಲಿಗಾಗಿ ಬರೋಬ್ಬರಿ 1 ಲಕ್ಷ ಮಂದಿ ಸತತ 7 ಗಂಟೆ ಕಾದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ನಟ ವಿಜಯ ಮಧ್ಯಾಹ್ನದ ಹೊತ್ತಿಗೆ ಕರೂರಿಗೆ ತಲುಪಬೇಕಿತ್ತು. ಆದರೆ ಏಳು ಗಂಟೆಗಳ ಕಾಲ ತಡವಾಗಿ ಬಂದ ಕಾರಣ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ. ನಟ ಸ್ಥಳಕ್ಕೆ ಬರುತ್ತಿದ್ದಂತೆ ಜನರ ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದು, ಇದರಿಂದ ಜನರು ಸ್ಥಳದಲ್ಲೇ ಮೂರ್ಛೆ ಹೋಗಲಾರಂಭಿಸಿದರು. ಇದನ್ನು ಗಮನಸಿದ ನಟ ಕೂಡಲೇ ತಮ್ಮ ಭಾಷಣ ನಿಲ್ಲಿಸಿ, ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಬಾಟಲಿ ಎಸೆಯುತ್ತಿದ್ದ ನಟ ವಿಜಯ್ ಹತ್ತಿರಕ್ಕೆ ಜನರು ಸಾಗಲು ಪ್ರಾರಂಭಿಸಿದ್ದು, ಈ ವೇಳೆ ಒಂದು ಭಾಗದ ಜನರ ನಡುವೆ ಕಾಲ್ತುಳಿತ ಸಂಭವಿಸಿದೆ. ಪರಿಣಾಮ 33 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಮೂವರು ಮಕ್ಕಳು ಮತ್ತು ವಯಸ್ಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಕರೂರಿಗೆ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೂರ್ ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್‌ಬಾಲಾಜಿ ಅವರಿಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.