ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ತಮಿಳಿಗ ವಿಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಆಯೋಜಿಸಿದ್ದ ಪ್ರಚಾರ ರ‍್ಯಾಲಿ ಭೀಕರ ದುರಂತಕ್ಕೆ ತಿರುಗಿತು. ವಿಜಯ್ ಅವರನ್ನು ನೋಡಲು ಹತ್ತಾರು ಸಾವಿರ ಜನರು ಸೇರಿದ್ದ ವೇಳೆ ಕಾಲ್ತುಳಿತ ಉಂಟಾಗಿ ಪರಿಸ್ಥಿತಿ ಗಂಭೀರವಾಯಿತು. ಈ ಅವಾಂತರದಲ್ಲಿ ಮಕ್ಕಳು ಹಾಗೂ ಮಹಿಳೆಯರು ಸೇರಿ ಒಟ್ಟು 39 ಜನರು ಸಾವನ್ನಪ್ಪಿದ್ದಾರೆ. ಹಲವರು ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರೆತ ಕೂಡಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಧ್ಯರಾತ್ರಿಯಲ್ಲೇ ಕರೂರಿನ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಗಳನ್ನು ಭೇಟಿಯಾಗಿ ಸಂತಾಪ ಸೂಚಿಸಿದರು. ಇದೆ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, “ಇದು ನಮ್ಮ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತಿದೊಡ್ಡ ದುರಂತ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸಬಾರದು. ಪ್ರಸ್ತುತ 51 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹೇಳಿದರು.
ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಘಟನೆಯ ಸಂಪೂರ್ಣ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ಆಯೋಗವನ್ನು ರಚಿಸುವುದಾಗಿ ತಿಳಿಸಿದ್ದಾರೆ.