ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉರುಫ್ ಜಾತಿ ಗಣತಿಯಲ್ಲಿ ಭಾಗವಹಿಸುವುದು ಅನಗತ್ಯ, ಜೊತೆಗೆ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ರೀತಿಯ ಸಹಾಯವಾಗುವುದಿಲ್ಲ ಎಂದು ಹಿರಿಯ ನ್ಯಾಯವಾದಿ ಬಿ.ವಿ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ವೇಳೆ ಕೇಳಲಾಗುವ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವೂ ಇದೆ ಎಂಬ ಆತಂಕವನ್ನೂ ಅವರು ಹೊರಹಾಕಿದ್ದಾರೆ.
ಬಿವಿ ಆಚಾರ್ಯ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ವೇಳೆ, ಈ ಸಮೀಕ್ಷೆಯ ಮುಖ್ಯ ಉದ್ದೇಶ ಹಿಂದುಳಿದ ಜಾತಿಗಳ ಪಟ್ಟಿಯನ್ನು ನವೀಕರಿಸುವುದು ಮತ್ತು ಅದರ ಸಂಪೂರ್ಣತೆ ಖಚಿತಪಡಿಸಿಕೊಳ್ಳುವುದೇ ಹೊರತು, ಇತರ ಸಮುದಾಯಗಳಿಗೆ ಪ್ರಯೋಜನ ತರುವುದಲ್ಲ ಎಂದು ಹೇಳಿದ್ದಾರೆ. ಆದಾಯ, ಆಧಾರ್ ಮತ್ತು ಇನ್ನೂ ಅನೇಕ ವೈಯಕ್ತಿಕ ಮಾಹಿತಿಯನ್ನು ಒಟ್ಟು 60ಕ್ಕೂ ಹೆಚ್ಚು ಪ್ರಶ್ನೆಗಳ ಮೂಲಕ ಕೇಳಲಾಗುತ್ತಿದೆ. ಇದು ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸದ ವಿಷಯವಾಗಿದ್ದು, ಭಾಗವಹಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಅವರು ಇನ್ನೂ ಸ್ಪಷ್ಟಪಡಿಸುತ್ತಾ, ಹೈಕೋರ್ಟ್ ಆದೇಶದಂತೆ ಜಾತಿಗಣತಿಯಲ್ಲಿ ಮಾಹಿತಿ ನೀಡುವುದು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯಾರನ್ನೂ ಬಲವಂತವಾಗಿ ಭಾಗವಹಿಸಲು ಒತ್ತಾಯಿಸಲಾಗುವುದಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಈ ಸಮೀಕ್ಷೆಗೆ ಬೆಂಬಲ ವ್ಯಕ್ತಪಡಿಸಿದ್ದು, ಹಿಂದುಳಿದ ವರ್ಗಗಳ ಸಚಿವರು, ಸಂಸದರು, ಶಾಸಕರು ಮತ್ತು ಹಿರಿಯ ನಾಯಕರ ಅಭಿಪ್ರಾಯದ ಆಧಾರದ ಮೇಲೆ ವಿಭಾಗವಾರು ಸಮಿತಿಗಳನ್ನು ರಚಿಸಲಾಗಿದೆ.