Sunday, September 28, 2025

ತಿಮ್ಮಪ್ಪನಿಗೆ ಬೇಕು ಇದೇ ತುಪ್ಪ, ದಾಖಲೆ ಬರೆದ ನಂದಿನಿ! ಹೇಗೆ ಅಂತೀರಾ? ಈ ಸುದ್ದಿ ಓದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡುವಿಗೆ ಕರ್ನಾಟಕದ ಕೆಎಂಎಫ್ ನಂದಿನಿ ತುಪ್ಪವೇ ಇಷ್ಟದ ಆಯ್ಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಐದು ಸಾವಿರ ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡುವ ಮೂಲಕ ಕೆಎಂಎಫ್ ಹೊಸ ದಾಖಲೆ ಬರೆದಿದೆ. ಶುದ್ಧತೆ ಮತ್ತು ಗುಣಮಟ್ಟದ ಕಾರಣದಿಂದ ನಂದಿನಿ ತುಪ್ಪಕ್ಕೆ ದೇಶ-ವಿದೇಶಗಳಲ್ಲಿಯೂ ಉತ್ತಮ ಖ್ಯಾತಿ ಸಿಕ್ಕಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ನೀಡಿದ ಮಾಹಿತಿಯ ಪ್ರಕಾರ, 2024 ಡಿಸೆಂಬರ್‌ನಿಂದ ಆರಂಭವಾದ ಪೂರೈಕೆಯಲ್ಲಿ ಕಳೆದ ಸಾಲಿಗಿಂತ ಶೇಕಡಾ 30ರಷ್ಟು ಹೆಚ್ಚಳ ಕಂಡುಬಂದಿದೆ. ತಿರುಮಲ ತಿರುಪತಿ ದೇವಸ್ಥಾನದಿಂದ (ಟಿಟಿಡಿ) ಹೆಚ್ಚಿದ ಬೇಡಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ 4,281 ಮೆಟ್ರಿಕ್ ಟನ್ ತುಪ್ಪ ಪೂರೈಸಿದ್ದು, ಈಗ ಮತ್ತೊಮ್ಮೆ ಆರು ತಿಂಗಳಿಗೆ 2 ಸಾವಿರ ಮೆಟ್ರಿಕ್ ಟನ್ ಪೂರೈಕೆಗೆ ಟೆಂಡರ್ ಕರೆದಿದೆ.

ಟಿಟಿಡಿ ಈಗಾಗಲೇ ಮೂರು ಬಾರಿ ಟೆಂಡರ್ ಮೂಲಕ ಕೆಎಂಎಫ್ ನಂದಿನಿ ತುಪ್ಪವನ್ನೇ ಆರಿಸಿಕೊಂಡಿರುವುದು ಗುಣಮಟ್ಟದ ಮೇಲಿನ ನಂಬಿಕೆಯನ್ನು ತೋರಿಸುತ್ತದೆ. ಯಾವುದೇ ತೊಂದರೆಗಳಿಲ್ಲದೆ ನಿರಂತರವಾಗಿ ಪೂರೈಕೆ ನಡೆಯುತ್ತಿರುವುದು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.