Sunday, September 28, 2025

ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿ ಭೀಕರ ಅಪಘಾತ: 12 ಮಂದಿಗೆ ಗಾಯ, ಮೂವರು ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಗಂದೂರು ಬಳಿಯ ಕೂರನಕೊಪ್ಪದ ಬಳಿ ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿ ಭಾರೀ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ 12 ಮಹಿಳೆಯರು ಹಾಗೂ ಚಾಲಕ ಗಾಯಗೊಂಡಿದ್ದು, ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

ಮೂಲಗಳ ಪ್ರಕಾರ, ಬೆಂಗಳೂರಿನಿಂದ ಬಂದಿದ್ದ ಮಹಿಳೆಯರ ತಂಡ ರೈಲಿನ ಮೂಲಕ ಸಾಗರ ತಲುಪಿ, ಅಲ್ಲಿ ಟಿಟಿ ವಾಹನವನ್ನು ಬಾಡಿಗೆ ಪಡೆದು ಸಿಗಂದೂರು ಚೌಡೇಶ್ವರಿ ದೇವಾಲಯದ ದರುಶನಕ್ಕೆ ತೆರಳುತ್ತಿದ್ದರು. ಆದರೆ ಕೂರನಕೊಪ್ಪ ಸಮೀಪದಲ್ಲಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು.

ಗಾಯಗೊಂಡವರಲ್ಲಿ ಮೂವರು ಮಹಿಳೆಯರನ್ನು ಗಂಭೀರ ಗಾಯಗಳೊಂದಿಗೆ ಸಾಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇತರರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಅಪಘಾತ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ.