Monday, September 29, 2025

ಜಡಿಮಳೆಗೆ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ: ಖುದ್ದು ಸ್ಥಳ ಪರಿಶೀಲನೆ ನಡೆಸಿದ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಮಳೆಯ ಪರಿಣಾಮ ಕೃಷ್ಣ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಯಾದಗಿರಿ, ಕಲಬುರ್ಗಿ, ವಿಜಯಪುರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಇದೇ ಸಂದರ್ಭ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಇಂದು ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಹಾನಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಭೀಮಾ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವದರಿಂದ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಜಂಟಿ ಸಮೀಕ್ಷೆ ನಡೆಸಿ ಸಮಗ್ರ ಬೆಳೆನಾಶ ವರದಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯಲ್ಲಿ ಭೀಮೆಯ ಪ್ರವಾಹದ ಸೆಳೆತಕ್ಕೆ ಈಗಾಗಲೇ ರಸ್ತೆಗಳು, ಸೇತುವೆಗಳು, ಜಮೀನುಗಳಲ್ಲಿ ಹುಲುಸಾಗಿ ಬೆಳೆದು ನಿಂತಿದ್ದ ಬೆಳೆಗಳು ಕೊಚ್ಚಿ ಹೋಗಿವೆ. ಮನೆಗಳು, ಕಟ್ಟಡಗಳು ಕುಸಿದು ಬಿದ್ದಿವೆ. ಹೊಲ ಗದ್ದೆಗಳಲ್ಲಿ ನೀರು ಹರಿಯುತ್ತಿರುವುದರಿಂದ ಅಪಾರ ಪ್ರಮಾಣ ಬೆಳೆಗಳಿಗೆ ನಷ್ಟವಾಗಿದೆ. ಪ್ರವಾಹದ ನೀರು ಹಳ್ಳಗಳಿಗೆ ವ್ಯಾಪಿಸಿಕೊಂಡಿದ್ದರಿಂದ ಗ್ರಾಮಗಳ ನಡುವಿನ ಸಂಪರ್ಕವೂ ಕಡಿತವಾಗಿದೆ.