ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಹೊರವಲಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಹೆಚ್ಚಾಗಿ ದಾಖಲಾಗುತ್ತಿರುವ ದರೋಡೆ ಪ್ರಕರಣಗಳು ಸಾರ್ವಜನಿಕರಲ್ಲಿ ಭೀತಿಯನ್ನೇ ಸೃಷ್ಟಿಸುತ್ತಿವೆ. ಈ ನಡುವೆ, ಸ್ಥಳೀಯ ಪೊಲೀಸರು ನಿರಂತರ ಗಸ್ತು ನಡೆಸಿ, ಮೂರೇ ದಿನದಲ್ಲಿ 37 ದರೋಡೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದ 6 ಅಪ್ರಾಪ್ತರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ ಈ ಗ್ಯಾಂಗ್ ರಾತ್ರಿ ಹೊತ್ತಿನಲ್ಲಿ ಮೂರು ಬೈಕ್‌ಗಳಲ್ಲಿ ಸುತ್ತಾಡುತ್ತ, ಮೊದಲ ದಿನ ದೊಡ್ಡಬಳ್ಳಾಪುರ, ಎರಡನೇ ದಿನ ಮಾದನಾಯಕನಹಳ್ಳಿ ಮತ್ತು ನೆಲಮಂಗಲ, ಮೂರನೇ ದಿನ ಸೂರ್ಯನಗರದಲ್ಲಿ ದರೋಡೆ ನಡೆಸಿದ್ದರು. ಹೀಗೆ ಬರೋಬ್ಬರಿ ಮೂರು ದಿನದಲ್ಲಿ 37 ಕಡೆ ಅಪ್ರಾಪ್ತರ ಗ್ಯಾಂಗ್ ದರೋಡೆ ಮಾಡಿತ್ತು. ಆರೋಪಿಗಳು ಬೈಕ್, ಕಾರು ಹಾಗೂ ಲಾರಿಗಳನ್ನು ಅಡ್ಡ ಹಾಕಿ, ಚಾಕು ತೋರಿಸಿ ಮೊಬೈಲ್, ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದರು.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಂತೆ, ಇದೇ ತಂಡ ಈ ಕೃತ್ಯಗಳನ್ನು ನಿರಂತರವಾಗಿ ಮಾಡುತ್ತಿದೆ ಎಂಬುದು ದೃಢಪಟ್ಟಿತು. ಗ್ರಾಮಾಂತರ ಪೊಲೀಸ್ ತಂಡ ವಿಶೇಷ ಕಾರ್ಯಾಚರಣೆಗೆ ನಿರ್ಧರಿಸಿ, ರಾತ್ರಿಯಿಡೀ ಗಸ್ತು ನಡೆಸಿ, ಬ್ಯಾಡರಹಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿದೆ.
ಅಪರಾಧಿಗಳಿಂದ 9 ಮೊಬೈಲ್ ಫೋನ್‌ಗಳು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಮೊದಲನೆಯ ವಿಚಾರಣೆಯಲ್ಲಿ ಓರ್ವನಿಗೆ ಹಿಂದಿನ ಅಪರಾಧ ದಾಖಲೆ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.