ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆ ಹಾಗೂ ಪ್ರವಾಹದಿಂದಾಗಿ ಕಲ್ಯಾಣ ಕರ್ನಾಟಕ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ 7 ದಿನಗಳಲ್ಲಿ 122 ಮಿಲಿ ಮೀಟರ್ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಧನೆಗಾಂವ್ ಆಣೆಕಟ್ಟೆಯಿಂದ ಹೆಚ್ಚುವರಿಯಾಗಿ ಮಾಂಜ್ರಾ ನದಿಗೆ ನೀರು ಹರಿಸಿರುವುದರಿಂದ ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಜಿಲ್ಲಾಡಳಿತ ಬೆಳೆ ಹಾನಿಯಾಗಿರುವ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಮೊದಲನೇ ಹಂತದ ಬೆಳೆ ಹಾನಿ ಜಂಟಿ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಸಿದೆ.
ಕಳೆದ ಮೂರು ದಿನಗಳಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 27 ಬ್ರಿಡ್ಜ್ ಗಳ ಮೇಲಿಂದ ನೀರು ಹರಿಯುತ್ತಿರುವುದರಿಂದ ಬೀದರ್, ಕಮಲನಗರ ಭಾಲ್ಕಿ , ಬಸವಕಲ್ಯಾಣ, ಹುಮನಾಬಾದ್, ಚಿಟಗುಪ್ಪಾ ಹಾಗೂ ಹುಲಸೂರ ರಸ್ತೆ ಸಂರ್ಪಕ ಕಡಿತಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ವಿಜಯಪುರದಲ್ಲಿ ಸಾಮಾನ್ಯ ಮಳೆಗಿಂತ ಸರಾಸರಿ ಶೇಕಡಾ 60ರಷ್ಟು ಹೆಚ್ಚು ಮಳೆಯಾಗಿದ್ದು, ವಿಶೇಷವಾಗಿ ಸೆಪ್ಟೆಂಬರ್-ತಿಂಗಳಿನಲ್ಲಿ ಸಾಮಾನ್ಯ ಮಳೆಗಿಂತ 227 ಮಿಲೀ ಮೀಟರ್ ಹೆಚ್ಚಿಗೆ ಮಳೆಯಾಗಿದೆ. ಇದು ವಾಡಿಕೆಗಿಂತ ಶೇಕಡಾ 73ರಷ್ಟು ಹೆಚ್ಚಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾ ನದಿ ಪಾತ್ರಕ್ಕೆ ಅಂದಾಜು 3.50 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬಿಟ್ಟಿರುವುದರಿಂದ ಜಿಲ್ಲೆಯ ಇಂಡಿ ತಾಲೂಕಿನ 8 ಗ್ರಾಮಗಳು ಮತ್ತು ಆಲಮೇಲ ತಾಲೂಕಿನ ೬ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಒಟ್ಟು 17 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಒಟ್ಟು 860 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ, ವಸತಿ, ಉಪಹಾರ, ಊಟದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾಗಿ ಈ ಭಾಗದ ಜನರು ಹಾಗೂ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಜಡಿ ಮಳೆಗೆ ಕಂಗಾಲಾಗಿದೆ ಕಲ್ಯಾಣ ಕರ್ನಾಟಕ: ಎಲ್ಲೆಡೆ ಪ್ರವಾಹ ಪರಿಸ್ಥಿತಿ, ಜನಜೀವನ ಅಸ್ತವ್ಯಸ್ತ
