Tuesday, September 30, 2025

ದಸರಾ ಹಬ್ಬಕ್ಕೆ ಊರಿಗೆ ಹೋಗೋ ಪ್ಲಾನ್ ಇದ್ಯಾ? ಟ್ರೈನ್ ನಲ್ಲಿ ಹೋಗೋರಾದ್ರೆ ಈ ಸುದ್ದಿ ಮಿಸ್ ಮಾಡ್ಬೇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಸರಾ ಹಬ್ಬದ ಸಂಭ್ರಮ ರಾಜ್ಯಾದ್ಯಂತ ಜೋರಾಗಿದ್ದು, ಈ ಸಂದರ್ಭದಲ್ಲಿ ಜನರು ತಮ್ಮ ಊರುಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಹೆಚ್ಚುವರಿ ಜನಸಂಚಾರ ನಿರ್ವಹಿಸಲು ನೈಋತ್ಯ ರೈಲ್ವೇಸ್‌ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ. ಬೆಂಗಳೂರು, ಮಂಗಳೂರು ಮತ್ತು ಎರ್ನಾಕುಲಂ ಮಾರ್ಗದಲ್ಲಿ ಈ ರೈಲುಗಳು ಸಂಚರಿಸಲಿವೆ.

ವಿಶೇಷ ರೈಲುಗಳ ವೇಳಾಪಟ್ಟಿ
06257 ಸಂಖ್ಯೆಯ ವಿಶೇಷ ರೈಲು ಸೆಪ್ಟೆಂಬರ್ 30ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಇದರ ಪ್ರತಿರೈಲು 06258 ಅಕ್ಟೋಬರ್ 1ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 11.30ರ ವೇಳೆಗೆ ಯಶವಂತಪುರ ತಲುಪಲಿದೆ. ಈ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು ಮತ್ತು ಬಂಟ್ವಾಳ ಸ್ಟೇಶನ್‌ಗಳಲ್ಲಿ ನಿಲ್ಲಲಿವೆ.

ಇದಲ್ಲದೆ, 06147 ಸಂಖ್ಯೆಯ ರೈಲು ಅಕ್ಟೋಬರ್ 5ರಂದು ಸಂಜೆ 4.20ಕ್ಕೆ ಎರ್ನಾಕುಲಂ ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಿಗ್ಗೆ 8.15ಕ್ಕೆ ಬೆಂಗಳೂರಿಗೆ ತಲುಪಲಿದೆ. ಮರಳಿ ಬರುವ 06148 ಸಂಖ್ಯೆಯ ರೈಲು ಸೆಪ್ಟೆಂಬರ್ 29 ಮತ್ತು ಅಕ್ಟೋಬರ್ 6ರಂದು ರಾತ್ರಿ 10.10ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 10 ಗಂಟೆಗೆ ಎರ್ನಾಕುಲಂ ತಲುಪಲಿದೆ. ಈ ರೈಲುಗಳು ಆಲುವ, ತ್ರಿಶೂರು, ಪಾಲಕ್ಕಾಡ್ ಜಂಕ್ಷನ್, ಪೊದನೂರು, ತಿರುಪ್ಪೂರು, ಈರೋಡ್, ಸಲೇಮ್, ಬಂಗಾರ್‌ಪೇಟೆ, ವೈಟ್‌ಫೀಲ್ಡ್ ಮತ್ತು ಕೆ.ಆರ್.ಪುರಂ ಸ್ಟೇಶನ್‌ಗಳಲ್ಲಿ ನಿಲುಗಡೆಗೊಳ್ಳಲಿವೆ.

ದಸರಾ ಹಬ್ಬದ ಪ್ರಯಾಣ ಸುಗಮವಾಗಲು ನೈಋತ್ಯ ರೈಲ್ವೇ ಕೈಗೊಂಡ ಈ ವಿಶೇಷ ರೈಲು ಸೇವೆಗಳು ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿವೆ. ಹಬ್ಬದ ಸಮಯದಲ್ಲಿ ಹೆಚ್ಚುವರಿ ಸಾರಿಗೆ ವ್ಯವಸ್ಥೆಯಿಂದ ಜನರು ತಮ್ಮ ಪ್ರಯಾಣವನ್ನು ಸುಗಮವಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ.