Tuesday, September 30, 2025

‘ಗಾರ್ಡಿಯನ್ ಆಫ್ ದ ಹಾರ್ಟ್ 3.0’: ನಿಮ್ಮ ಹೃದಯ ಕಾಪಾಡ್ಕೊಳೋಕೆ ಮಣಿಪಾಲದಲ್ಲಿ ಶುರುವಾಗಿದೆ ಹೊಸ ಅಭಿಯಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲ್ ಆಸ್ಪತ್ರೆಗಳ ಸಮೂಹ ಹೃದಯ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ‘ಗಾರ್ಡಿಯನ್ ಆಫ್ ದ ಹಾರ್ಟ್ 3.0’ ಅಭಿಯಾನವನ್ನು ಆರಂಭಿಸಿದೆ.

ಸತತ ಮೂರು ವರ್ಷದಿಂದ ಮಣಿಪಾಲ್ ಆಸ್ಪತ್ರೆ ಗಾರ್ಡಿಯನ್ ಆಫ್ ದ ಹಾರ್ಟ್ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ವರ್ಷ ಎರಡು ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹಯೋಗದೊಂದಿಗೆ ‘ಹೃದಯ ಆಕಾರದ ಟ್ರಾಫಿಕ್ ಸಿಗ್ನಲ್’ಗಳು ಮತ್ತು ‘ಹಾರ್ಟ್ ಲೈವ್ – ಬ್ರೇಕಿಂಗ್ ಲೈವ್‌ ಫ್ರಮ್‌ ಬೆಂಗಳೂರು’ ಎಂಬ ವಿಶಿಷ್ಟ ಅಭಿಯಾನ ಆಯೋಜಿಸಿದೆ.

ಮಣಿಪಾಲ್ ಆಸ್ಪತ್ರೆ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹಯೋಗದೊಂದಿಗೆ ಎಚ್‌ಎಎಲ್, ಎಂಜಿ ರಸ್ತೆ, ಟ್ರಿನಿಟಿ, ಕಬ್ಬನ್ ಪಾರ್ಕ್, ಬ್ರಿಗೇಡ್ ರಸ್ತೆ ಸೇರಿದಂತೆ ಸುಮಾರು 40 ಜಂಕ್ಷನ್‌ಗಳ ಪ್ರಾಫಿಕ್ ಸಿಗ್ನಲ್‌ಗಳು ಹೃದಯದ ಆಕಾರದ ಕೆಂಪು ದೀಪಗಳು ಬೆಳಗುವಂತೆ ಮಾಡಲಾಗಿದೆ. ಇದರ ಅರ್ಥ ಹೃದಯಕ್ಕೂ ವಿಶ್ರಾಂತಿ ಅತ್ಯವಶ್ಯಕವೆಂದು ಸಾರುತ್ತದೆ.

ಇದೆ ವೇಳೆ, ಹೃದಯಾಘಾತ ಮಾಹಿತಿಗಳನ್ನೊಳಗೊಂಡ ಕ್ಯೂಆರ್‌ಕೋಡ್ ಬೋರ್ಡ್‌ಗಳು ಎಲ್ಲ ಟ್ರಾಫಿಕ್‌ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ನೆರವನ್ನು ಪಡೆಯ ಬಹುದಾಗಿದೆ. ಈ ಮೂಲಕ ಟ್ರಾಫಿಕ್ ಸಿಗ್ನಲ್‌ಗಳಲ್ಲೂ ಹೃದಯ ಸಂದೇಶಗಳನ್ನು ತೋರಿಸುವ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯೂ ಜಾಗೃತಿ ಮೂಡಿಸುವುದಕ್ಕೆ ನೆರವಾಗಿದೆ.

‘ಹಾರ್ಟ್ ಲೈವ್ -ಬ್ರೇಕಿಂಗ್ ಲೈವ್‌ ಫ್ರಾಮ್‌ ಬೆಂಗಳೂರು’ ಎಂಬ ವಿಶೇಷ ಅಭಿಯಾನದಲ್ಲಿ , ಮಣಿಪಾಲ್ ಆಸ್ಪತ್ರೆಯ ಪ್ರತಿನಿಧಿಗಳು ಪತ್ರಕರ್ತರ ರೀತಿಯಲ್ಲಿ ನಗರದಾದ್ಯಂತ ಜನರೊಂದಿಗೆ ನೇರವಾಗಿ ಸಂವಾದ ನಡೆಸಿದರು.

ಸಂವಾದದಲ್ಲಿ ನಾಗರಿಕರು, ಟ್ರಾಫಿಕ್ ಪೊಲೀಸರು, ಪೈಲಟ್‌ಗಳು, ಏರ್‌ಹೋಸ್ಟೆಸ್‌, ಆಟೋ/ಕ್ಯಾಬ್ ಚಾಲಕರು, ಫಿಟ್ನೆಸ್ ಅಭಿಮಾನಿಗಳು, ಸಿಇಓಗಳು, ಉದ್ಯಮಿಗಳು, ಐಟಿ ವೃತ್ತಿಪರರು, ಪತ್ರಕರ್ತರು, ವಿದ್ಯಾರ್ಥಿಗಳು, ಸಿಐಎಸ್‌ಎ್, ಎನ್‌ಎಎಲ್, ಎಚ್‌ಎಎಲ್ ಹಾಗೂ ಬ್ಯಾಂಕ್ ನೌಕರರು ಸೇರಿದಂತೆ ವಿವಿಧ ವರ್ಗದ ಜನರು ತಮ್ಮ ದಿನನಿತ್ಯದ ಜೀವನಶೈಲಿಯ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ವೇಳೆ ಮಣಿಪಾಲ್ ಆಸ್ಪತ್ರೆಯ ತಜ್ಞ ಕಾರ್ಡಿಯಾಲಜಿಸ್ಟ್‌ಗಳು ಜನರ ಪ್ರಶ್ನೆಗಳಿಗೆ ಉತ್ತರಿಸಿ ಹೃದಯ ಸಂಬಂಧಿತ ಹಲವು ಸರಿ -ತಪ್ಪುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿದರು. ಹೃದಯ ತಪಾಸಣೆಗಳ ಮಹತ್ವ ಮತ್ತು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಚರ್ಚೆ ನಡೆಸಲಾಯಿತು.

ಗಾರ್ಡಿಯನ್ ಆಫ್‌ ದಿ ಹಾರ್ಟ್ 3.0 ಅಭಿಯಾನದ ಉದ್ದೇಶ ಹೃದಯ ಆರೋಗ್ಯ ಕಾಪಾಡಿಕೊಳ್ಳುವುದು ಬದುಕಿನ ನಿತ್ಯ ಭಾಗವನ್ನಾಗಿ ಮಾಡುವುದು ಮತ್ತು ಪ್ರತಿಯೊಬ್ಬರೂ ಸ್ವಯಂ ಪರಿಶೀಲನೆ ಮಾಡಿ ಹೃದಯ ಸ್ನೇಹಿ ಜೀವನ ಶೈಲಿಯತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುವುದಾಗಿದೆ.