Thursday, October 2, 2025

ಚಿತ್ರದುರ್ಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ

ಹೊಸದಿಗಂತ ವರದಿ ಚಿತ್ರದುರ್ಗ:

ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಬೇಕು. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಮಾನದಂಡಗಳನ್ನು ಬದಲಾಯಿಸಿ ಹಣ ಕಟ್ಟಿಸಿಕೊಂಡು ಎಲ್ಲಾ ರೈತರ ಖಾತೆಗಳಿಗೆ ವಿಮಾಹಣ ಹಾಕಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಜಾಫರ್ ಶರೀಫ್ ಮಾತನಾಡಿ, ಮುಂಗಾರು ಮಳೆ ನಂಬಿಕೊಂಡು ಬಿತ್ತನೆ ಮಾಡಿದ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಪ್ರತಿ ವರ್ಷವೂ ರೈತರ ಬದುಕಿನಲ್ಲಿ ಮಳೆ ಕಣ್ಣುಮುಚ್ಚಾಲೆ ಆಟವಾಡುತ್ತಿದೆ. ಸಕಾಲಕ್ಕೆ ಮಳೆ ಬಾರದ ಕಾರಣ ಶೇಂಗಾ ಸೇರಿದಂತೆ ಇತರ ಬೆಳೆಗಳು ಒಣಗಿ ನೆಲ ಕಚ್ಚಿ ಹೋಗುತ್ತಿವೆ. ರೈತ ಎಕರೆಗೆ ಬೀಜ ಗೊಬ್ಬರಕ್ಕೆ ಸುಮಾರು ೪೫ ರಿಂದ ೫೦ ಸಾವಿರ ರೂ.ಗಳನ್ನು ಖರ್ಚು ಮಾಡಿ ಹಾಕಿದ ಬಂಡವಾಳ ಸಹ ಕೈ ಸೇರದಂತಾಗಿದೆ ಎಂದು ಹೇಳಿದರು.

ಒಂದೆಡೆ ಮಳೆ ಇಲ್ಲದೇ ಬೆಳೆಗಳು ಒಣಗಿ ಹೋಗಿವೆ. ಮತ್ತೊಂದೆಡೆ ಅತಿಯಾದ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಬೆಳೆನಷ್ಟವಾಗಿದೆ. ಈರುಳ್ಳಿ ಬೆಳೆ ಕಟಾವು ಮಾಡಲಾಗದೆ ಕೊಳೆತು ಹೋಗುತ್ತಿದೆ. ಕಟಾವು ಮಾಡಿ ಜೋಪಾನ ಮಾಡಿದ ಒಂದಷ್ಟು ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಬೆಳೆ ಕೈಗೆ ಸಿಗದೆ ರೈತರು ದಿಕ್ಕು ತೋಚದಂತಾಗಿದ್ದಾರೆ. ವಿಮಾ ಕಂಪನಿಗಳು ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾನದಂಡಗಳನ್ನು ರೂಪಿಸಿಕೊಂಡು ರೈತರನ್ನು ದಿವಾಳಿ ಮಾಡಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿ ಅತಿವೃಷ್ಟಿ ಉಂಟಾಗಿದೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿವೆ. ಕೂಡಲೇ ಸರ್ಕಾರ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಜಿಲ್ಲೆಯನ್ನು ಬರ ಪೀಡಿದ ಪ್ರದೇಶ ಎಂದು ಘೋಷಿಸಬೇಕು. ಜಿಲ್ಲೆಯ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಮೊತ್ತ ಹಂಚಿಕೆ ಆಗಬೇಕು. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಮಾನದಂಡಗಳನ್ನು ಬದಲಾಯಿಸಿ ಹಣವನ್ನು ಕಟ್ಟಿಸಿಕೊಂಡು ಎಲ್ಲಾ ರೈತರ ಖಾತೆಗಳಿಗೆ ವಿಮಾ ಹಣ ಹಾಕಬೇಕು ಎಂದು ಒತ್ತಾಯಿಸಿದರು.