Thursday, October 2, 2025

ಹಗಲು-ರಾತ್ರಿ ಎನ್ನದೇ ಸರ್ವೆ, ಐದೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಟೀಚರಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದ್ದು, ನೆಟ್‌ವರ್ಕ್‌ ಸಮಸ್ಯೆ, ಸರ್ವರ್‌ ಇಶ್ಯೂ ಮಧ್ಯೆ ಶಿಕ್ಷಕರು ನಿಧಾನಕ್ಕೆ ಸರ್ವೆ ಮುಗಿಸುತ್ತಿದ್ದಾರೆ. ಸಿಟಿಗಳಲ್ಲೇ ಜನರು ಸರ್ವೆಗೆ ಸರಿಯಾಗಿ ಸ್ಪಂದನೆ ನೀಡದೇ ಇರುವುದು, ನಾಳೆ ಬನ್ನಿ ಎನ್ನುವುದು, ಒಟಿಪಿ ಹೇಳಲು ಹೆದರುತ್ತಿದ್ದಾರೆ.

ಈ ಸಮಸ್ಯೆಗಳ ಮಧ್ಯೆ ಶಿಕ್ಷಕಿಯೊಬ್ಬರು ಬರೀ ಐದು ದಿನಗಳಲ್ಲಿಯೇ ಸರ್ವೆ ಮುಗಿಸಿದ್ದಾರೆ. ಸಿಟಿಗಳಲ್ಲಿ ಶಿಕ್ಷಕರಿಗೆ 250 ಮನೆಗಳ ಟಾರ್ಗೆಟ್‌ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ 116 ಮನೆಗಳ ಟಾರ್ಗೆಟ್‌ ನೀಡಲಾಗಿದೆ. ಈ ಟಾರ್ಗೆಟ್‌ನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಟೀಚರ್‌ ಕಂಪ್ಲೀಟ್‌ ಮಾಡಿದ್ದಾರೆ.

ಕುಗ್ರಾಮವಾದರೂ ಸರ್ವೆ ಮಾಡಿ ಇಡೀ ರಾಜ್ಯದಲ್ಲಿ ಸರ್ವೆ ಮುಗಿಸಿದ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಳ್ಳಕೆರೆ ಪಟ್ಟಣದ ಶಿಕ್ಷಕಿ ಎಂ. ರಾಧಾ ಅವರು ಮೊದಲ ದಿನ ಸರ್ವೆ ಮಾಡಲಾಗದೆ ಒದ್ದಾಡಿದ್ದಾರೆ. ಇಡೀ ದಿನಕ್ಕೆ ಕೇವಲ ಒಂದು ಸರ್ವೆ ಮಾತ್ರ ಪೂರ್ಣಗೊಂಡಿದೆ. ಆದರೆ ನಂತರ ಸರ್ವೆ ಸರಾಗವಾಗಿ ನಡೆದಿದೆ. ಹಳ್ಳಿಗಳಲ್ಲಿ ಜನ ಕೆಲಸಕ್ಕೆ ಹೋಗಿಬಿಡುತ್ತಾರೆ. ಇನ್ನು ಸಿಗುವುದು ರಾತ್ರಿಯೇ! ಹಾಗಾಗಿ ರಾಧಾ ಹಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಲ್ಲಿಯೇ ಇದ್ದು ಜನ ಕೆಲಸಕ್ಕೆ ಹೊರಡುವ ಮುನ್ನ, ಕೆಲಸದಿಂದ ಬಂದ ನಂತರ, ಹೀಗೆ ಹಗಲು ರಾತ್ರಿ ಎನ್ನದೇ ಸರ್ವೆ ಮುಗಿಸಿದ್ದಾರೆ.

ನಾನು ದಾಸರ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದೇನೆ. ಹಗಲು ಹೊತ್ತು ಸರ್ವರ್ ಸಿಗ್ತಿರಲಿಲ್ಲ, ರಾತ್ರಿ ಹೊತ್ತು ಸುಲಭವಾಗಿ ಸರ್ವರ್ ಲಭ್ಯ ಇರುತ್ತಿದ್ದರಿಂದಾಗಿ ರಾತ್ರಿ ಹೊತ್ತು ಮನೆಗಳಿಗೆ ತೆರಳಿದೆ. ಮಧ್ಯ ರಾತ್ರಿ ಜನ ಸಹಕರಿಸಿ ಮಾಹಿತಿ ನೀಡ್ತಿದ್ದರು. ಸರ್ಕಾರ ನೀಡಿದ ಜವಾಬ್ದಾರಿ ಬಗ್ಗೆ ನಾವು ಪ್ರಶ್ನೆ‌ ಮಾಡುವಂತಿಲ್ಲ, ಅದನ್ನು ನಿಭಾಯಿಸಿದ್ದೇನೆ.‌ ಸಮೀಕ್ಷೆ ಮಾಡುವ ವೇಳೆ ಸಮಸ್ಯೆ ಆಯ್ತು, ಆದರೆ ಸಮಸ್ಯೆ ಇಲ್ಲದ ಕೆಲಸ ಇಲ್ವಲ್ಲ ಎಂದು ಸಮೀಕ್ಷೆ ಮಾಡಿದ್ದೇನೆ ಎಂದಿದ್ದಾರೆ.