ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರ್ಕಾರ ದಸರಾ ಹಬ್ಬದಲ್ಲಿ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಪ್ರಯಾಣ ದರ ಹೆಚ್ಚಿಸುವ ಮೂಲಕ ‘ಮಹಿಷಾಸುರ ಟ್ಯಾಕ್ಸ್’ ಹಾಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.
‘ಬೆಂಗಳೂರು-ಮೈಸೂರು’ ಬಸ್ ಪ್ರಯಾಣ ದರ ಹೆಚ್ಚಿಸಿ ಜನರ ಪಾಲಿಗೆ ‘ಮಹಿಷಾಸುರ’ ಸರ್ಕಾರವಾಗಿದೆ. ಈಗಾಗಲೇ 48ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿದೆ. ಇದೀಗ ದಸರಾ ಹಬ್ಬಕ್ಕೂ ಮೊದಲೇ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನೂ ಬರೋಬ್ಬರಿ 20-30 ರೂ. ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ರೀತಿ ಹಗಲು ದರೋಡೆಗೆ ಇಳಿದಿದೆ. ದುರಾಡಳಿತದ ಪರಮಾವಧಿ ಎಲ್ಲೆ ಮೀರಿದೆ. ಭರವಸೆಗಳನ್ನು ನಂಬಿ ಅಧಿಕಾರ ಕೊಟ್ಟ ಶ್ರೀಸಾಮಾನ್ಯರು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ ಜೋಶಿ.