ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ನಾಡಿನ ಜೀವ ನದಿ ಕಾವೇರಿ ಮಾತೆಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಐದು ದಿನಗಳ ಕಾಲ ಜರುಗಿದ ಕಾವೇರಿ ಆರತಿಗೆ ನಿನ್ನೆ ರಾತ್ರಿ ಯಶಸ್ವಿಯಾಗಿ ತೆರೆಬಿದ್ದಿದೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಐದು ದಿನಗಳಲ್ಲಿ ಸಾವಿರಾರು ಜನರು ಸಾಕ್ಷಿ ಆದರು. ಸಕ್ಕರೆನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ ಬೃಂದಾವನ ಐದು ದಿನಗಳ ಕಾವೇರಿ ಆರತಿಯಿಂದ ಮೇಳೈಸಿತು.
ಹಳೆ ಮೈಸೂರು ಭಾಗದ ಜನರಿಗೆ ನೀರುಣಿಸುವ ಕಾವೇರಿ ಮಾತೆಗೆ ನಮನ ಸಲ್ಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ಆರತಿ ನೇರವೇರಿಸಬೇಕೆಂಬ ಕನಸು ಕಂಡಿದ್ದರು. ಅದರಂತೆ ಕೆಆರ್‌ಎಸ್ ಡ್ಯಾಂನ ಬೃಂದಾವನದಲ್ಲಿ ಸಾಂಕೇತಿಕವಾಗಿ ಕಳೆದ ಐದು ದಿನಗಳ ಕಾಲ ಕಾವೇರಿ ಆರತಿ ಕಾಲ ಜರುಗಿತು. ಈ ಆರತಿಗೆ ಕಳೆದ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಗೋಧೂಳಿ ಸಮಯದಲ್ಲಿ ಚಾಲನೆ ನೀಡುವ ಮೂಲಕ ಹೊಸ ಆಚರಣೆಗೆ ಮುನ್ನುಡಿ ಬರೆದಿದ್ದರು.
ಐದು ದಿನಗಳಲ್ಲೂ ಮೊದಲಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರ ತಂಡ ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಕಾವೇರಿ ಆರತಿಯನ್ನು ಪ್ರಾರಂಭಿಸಿದರು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಮಾಡಿ ಬಳಿಕ ಸಂಕಲ್ಪ ಮಾಡಲಾಯಿತು. ನಂತರ ಕಾವೇರಿ ಆರತಿಯೊಂದಿಗೆ ಸಂಪನ್ನ ಮಾಡಲಾಯಿತು. ಇದಾದ ನಂತರ ವಾರಣಾಸಿಯ ವೈದಿಕ ತಂಡದಿಂದ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನೆರವೇರಿಸಲಾಯಿತು.