ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಹಬ್ಬ ದಸರಾವನ್ನ ಒಂದು ವಾರಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು. ಕರ್ನಾಟಕದ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆ ಕಾರ್ಯಕ್ರಮದಲ್ಲಿ ವಿಶಿಷ್ಟವಾಗಿ ಅನಾವರಣಗೊಂಡಿದ್ದು, ದೇಶ-ವಿದೇಶಗಳ ಪ್ರಯಾಣಿಕರು ಕಣ್ತುಂಬಿಕೊಂಡಿದ್ದಾರೆ.
ಸೆ. 22ರಿಂದ ಸೆ. 29ರವರೆಗೆ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ ಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿತ್ತು. ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಯಾಣಿಕರಿಗಷ್ಟೇ ಅಲ್ಲದೆ, ಬೆಂಗಳೂರು ನಗರದ ನಾಗರಿಕರಿಗೂ ಮುಕ್ತ ಮತ್ತು ಉಚಿತ ಪ್ರವೇಶ ಕಲ್ಪಿಸಲಾಗಿತ್ತು.
ವಿಮಾನ ನಿಲ್ದಾಣದಲ್ಲಿ ದಸರಾ ಆಚರಣೆಯು ಜಾನಪದ ಕಲಾ ಪ್ರದರ್ಶನಗಳ ಮೂಲಕ ಪ್ರಾರಂಭಗೊಂಡಿದ್ದು, ವೀರಾವೇಶಭರಿತ ಡೊಳ್ಳು ಕುಣಿತ ವೀಕ್ಷಕರ ಗಮನ ಸೆಳೆದಿದೆ. ಬೃಹತ್ ಗಾತ್ರದ ಗಾರುಡಿ ಗೊಂಬೆಗಳ ನೃತ್ಯವು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.