Monday, October 6, 2025

ಮಲ್ಲಿಕಾರ್ಜುನ ಖರ್ಗೆಗೆ ಶಸ್ತ್ರಚಿಕಿತ್ಸೆ: ಪುತ್ರ ಪ್ರಿಯಾಂಕ್​ ಖರ್ಗೆ ನೀಡಿದ ಮಾಹಿತಿ ಏನು? ​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯ ಹಿನ್ನಲೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹೆಚ್ಚಾಗಿತ್ತು. ಈ ಕುರಿತು ಪುತ್ರ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದ್ದು, ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೃದಯ ಸಂಬಂಧಿ ಸಮಸ್ಯೆ ಮತ್ತು ಶ್ವಾಸಕೋಶದ ಸಮಸ್ಯೆಗಳ ಹಿನ್ನೆಲೆ ವೈದ್ಯರು ಪೇಸ್ ಮೇಕರ್ ಅಳವಡಿಸಲು ಸಲಹೆ ನೀಡಿದ್ದರು. ಈ ಶಸ್ತ್ರಚಿಕಿತ್ಸೆ ಸಾಮಾನ್ಯ ಮತ್ತು ಸಣ್ಣ ಪ್ರಮಾಣದ್ದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪೇಸ್ ಮೇಕರ್ ಅಳವಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ. ಎಲ್ಲರ ಆಶೀರ್ವಾದಗಳಿಗೆ ಕೃತಜ್ಞತೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ. ಅಕ್ಟೋಬರ್ 3ರಿಂದ ಮಲ್ಲಿಕಾರ್ಜುನ ಖರ್ಗೆ ಅವರು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ.