Sunday, October 5, 2025

ಕುರ್ಚಿ ಉಳಿಸಿಕೊಳ್ಳೋಕೆ ಜಾತಿಗಣತಿ ಅನ್ನೋ ತಂತ್ರ: ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ರಾಜಕೀಯ ವಾದ-ವಿವಾದಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ 5 ವರ್ಷ ನಾನು ಸಿಎಂ ಎಂದು ಹೇಳಿಕೊಳ್ಳುತ್ತಿದ್ದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣದವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿಗಣತಿಯ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಜೋಶಿ ಆರೋಪಿಸಿದರು.

ಅವರು ಧಾರವಾಡದಲ್ಲಿ ಮಾತನಾಡಿ, ಕೇಂದ್ರ ಸರ್ಕಾರವೇ ಜನಗಣತಿ ನಡೆಸಲು ನಿರ್ಧಾರ ಕೈಗೊಂಡಿದೆ. ನಮಗೆ ಗಣತಿ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ, ರಾಜ್ಯದ ಸಮೀಕ್ಷೆಯಲ್ಲಿ ಅನಾವಶ್ಯಕ ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಸೇರಿಸಲಾಗಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ ಎಂಬ ನೂತನ ವರ್ಗಗಳನ್ನು ಉಲ್ಲೇಖಿಸಿರುವುದು ಹಿಂದು ಸಮಾಜದಲ್ಲಿ ವಿಭಜನೆ ಉಂಟುಮಾಡಲು ಮಾಡಿದ ಪ್ರಯತ್ನ. ಇದು ಮತಾಂತರಕ್ಕೆ ಪ್ರೋತ್ಸಾಹಿಸುವ ಸಮೀಕ್ಷೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ, ‘ಯಾವುದಾದರೂ ಸಾಮಾಜಿಕ ಸಂಘಟನೆಗೆ ಸೇರಿದ್ದೀರಾ?’ ಎಂಬ ಪ್ರಶ್ನೆ ಕೂಡ ಹಿಂದು ಸಮಾಜವನ್ನು ಒಡೆಯುವ ಉದ್ದೇಶದ ಭಾಗ ಎಂದು ಜೋಶಿ ಆರೋಪಿಸಿದರು. ವೀರಶೈವ ಲಿಂಗಾಯತ ಸಮುದಾಯದ ಶ್ರೀಗಳೂ ಕೂಡ ಸಮಾವೇಶ ನಡೆಸಿ, ಜಾತಿ ಬದಲಾದರೂ ಎಲ್ಲರೂ ಹಿಂದೂಗಳೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಹಿಂದು ಸಮಾಜವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಪ್ರಕಾರ, ಜಾತಿಗಣತಿ ಸಮೀಕ್ಷೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಂಶಗಳ ಆಧಾರದ ಮೇಲೆ ಮಾಹಿತಿಯನ್ನು ಸಂಗ್ರಹಿಸುವುದು. ಹಿಂದುಳಿದ ಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ವಿವಿಧ ವರ್ಗಗಳ ವಾಸ್ತವ ಸ್ಥಿತಿ ತಿಳಿದುಬರುವುದು ಮುಖ್ಯ ಉದ್ದೇಶವೆಂದು ತಿಳಿಸಿದೆ. ಆದರೆ ಸಮೀಕ್ಷೆಯಲ್ಲಿ ಹೊಸ ಜಾತಿ ವರ್ಗಗಳನ್ನು ಸೃಷ್ಟಿಸಿದ್ದು ಹಾಗೂ ವೈಯಕ್ತಿಕ ಪ್ರಶ್ನೆಗಳನ್ನೂ ಸೇರಿಸಿರುವುದರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.