ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಕಲಿ ವೈದ್ಯರ ಕಾಟ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಿಗ್ಗಲೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಜ್ವರದಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಯೊಬ್ಬಳು ಕ್ಲಿನಿಕ್‌ನಲ್ಲಿ ನೀಡಲಾದ ಇಂಜೆಕ್ಷನ್‌ನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸಂತೆಹಳ್ಳಿ ಗ್ರಾಮದ ಕ್ಲಿನಿಕ್‌ಗೆ ಪೋಷಕರು ಮಗಳನ್ನು ಕರೆದುಕೊಂಡು ಹೋದಾಗ ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ನಕಲಿ ಎಂದು ತಿಳಿದುಬಂದಿದೆ. ಇಂಜೆಕ್ಷನ್ ಹಾಕಿದ ಕೆಲವೇ ಹೊತ್ತಿನಲ್ಲಿ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದು, ನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಆಕೆಯ ಪ್ರಾಣ ಉಳಿಯಲಿಲ್ಲ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ವೈದ್ಯರ ಕಾಟ ಹೊಸದೇನಲ್ಲ. ಮೂವರು ವರ್ಷಗಳ ಹಿಂದೆ ಇದೇ ಕೋಲಾರ ಜಿಲ್ಲೆಯಲ್ಲಿ ದಾಖಲೆಗಳಿಲ್ಲದೆ ಚಿಕಿತ್ಸೆ ನೀಡುತ್ತಿದ್ದ ಮೂವರು ನಕಲಿ ವೈದ್ಯರ ಕ್ಲಿನಿಕ್‌ಗಳಿಗೆ ತಹಶೀಲ್ದಾರರು ಬೀಗ ಹಾಕಿದ್ದರು.
ಬೆಂಗಳೂರಿನಿಂದ ಹಿಡಿದು ಕಲಬುರಗಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿತ್ತು. ದಂಡ ವಿಧಿಸುವುದರ ಜೊತೆಗೆ ಕೆಲ ಕ್ಲಿನಿಕ್‌ಗಳನ್ನು ಮುಚ್ಚಲಾಗಿತ್ತು.