Sunday, October 5, 2025

ನವೆಂಬರ್-ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಸಿಎಂ ಹುದ್ದೆ ಕಳೆದುಕೊಳ್ಳುತ್ತಾರೆ: ಆರ್. ಅಶೋಕ್ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಮತ್ತೆ ಕದನವೇಳೆಯ ಸುಳಿವು ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ ಅಥವಾ ಡಿಸೆಂಬರ್ ಒಳಗೆ ಹುದ್ದೆ ಕಳೆದುಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಆಂತರಿಕ ಕಲಹ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ಲೇವಡಿ ಮಾಡಿದರು.

ಅಶೋಕ್ ಅವರು, ಅಧಿಕಾರ ಹಂಚಿಕೆ ಒಪ್ಪಂದ ನಡೆದಿರುವುದು ನಿಜ. ಈಗಾಗಲೇ ಒಬ್ಬ ಸಚಿವರು ಮನೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಬಿಡುವುದಿಲ್ಲ, ಡಿಕೆ ಶಿವಕುಮಾರ್ ಹಠ ಬಿಡುವುದಿಲ್ಲ. ಕಾಂಗ್ರೆಸ್ ಒಳಜಗಳದಿಂದ ಸರ್ಕಾರ ಪತನವಾದರೂ ನಾವು ಸರ್ಕಾರ ರಚಿಸುವ ಯತ್ನ ಮಾಡುವುದಿಲ್ಲ. ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿದೆ. ಬೆಂಗಳೂರು ನಗರದಲ್ಲಿ ಹಳ್ಳ ಇಲ್ಲದ ರಸ್ತೆಯನ್ನು ತೋರಿಸಿದರೆ ಬಹುಮಾನ ಕೊಡುತ್ತೇವೆ ಎಂದು ಅವರು ವ್ಯಂಗ್ಯವಾಡಿದರು. ಕಾಂಗ್ರೆಸ್ ಶಾಸಕರೇ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು.