ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹದಿಂದ ಆಗಿರುವ ಅನಾಹುತಕ್ಕೆ ಅವಶ್ಯಕತೆ ಬಿದ್ದರೆ ನಾನೇ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಪರಿಹಾರಕ್ಕೆ ಮನವಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ಪ್ರವಾಹ ವಿಚಾರ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , 6 ಜಿಲ್ಲೆಯಲ್ಲಿ ಬೆಳೆ ನಾಶ ಆಗಿದೆ. 50ಕ್ಕೂ ಹೆಚ್ಚು ಜನರು, ಜಾನುವಾರುಗಳು ಸತ್ತು ಹೋಗಿವೆ. ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಅವ್ರು ಎಕ್ರೆಗೆ ಇಷ್ಟು ಹಣ ಅಂತ ಘೋಷಣೆ ಮಾಡಿದ್ರು. ಆದರೆ ಫೀಲ್ಡ್ಗೆ ಹೋಗಿ ಎಷ್ಟು ಪ್ರದೇಶ ಹಾನಿಯಾಗಿದೆ ಅಂತ ನೋಡಿ ಸಂಬಂಧಪಟ್ಟವರ ನೋವಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಆಡಳಿತವೂ ಮಾಡಿಲ್ಲ. ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
48 ಗಂಟೆ ಒಳಗೆ ಡಿಸಿಗಳು, ಜಿಲ್ಲಾ ಉಸ್ತುವಾರಿಗಳು ಜಾಗಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು. ನೋವಿನಲ್ಲಿ ಇರೋ ರೈತರಿಗೆ ಪರಿಹಾರ ಕೊಟ್ಟಿದ್ದಾರಾ ಇಲ್ವಾ ಅಂತ ನೋಡಿ ಮಾತಾಡಬೇಕು. ಮೂರ್ನಾಲ್ಕು ದಿನ ಆದ ಮೇಲೆ ಕಲಬುರಗಿಗೆ ವಿಮಾನದಲ್ಲಿ ಬಂದಿದ್ದಾರೆ. ನಾನೇ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗ್ತೀನಿ. ಸ್ಥಳ ಪರಿಶೀಲನೆ ಮಾಡಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮಾತಾಡ್ತೀನಿ ಎಂದಿದ್ದಾರೆ.
ಈಗಾಗಲೇ ಪರಿಹಾರ ಕೊಡಿ ಅಂತ ಪ್ರಧಾನಿ ಮೋದಿ, ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ಅವಶ್ಯಕತೆ ಬಿದ್ದರೆ ಮೋದಿ, ಅಮಿತ್ ಶಾಗೆ ಪತ್ರ ಬರೆಯುತ್ತೇನೆ. ನಾನೇ ದೆಹಲಿಗೆ ಹೋಗಿ ಪ್ರಧಾನಿ ಅವರ ಬಳಿ ಪರಿಹಾರಕ್ಕಾಗಿ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.