Wednesday, October 8, 2025

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡಿದ್ರೆ ಟಿಕೆಟ್ ಜೋಪಾನವಾಗಿಟ್ಟಿಕೊಳ್ಳಿ: ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡಿದ್ರೆ ಟಿಕೆಟ್ ಗಳನ್ನ ಭದ್ರವಾಗಿ ಇಟ್ಟುಕೊಳ್ಳಬೇಕು. ಹೌದು, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು 200ಕ್ಕೆ ನಿಗದಿಪಡಿಸುವ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಅಂತಿಮ ತೀರ್ಪು ಸರ್ಕಾರದ ಪರವಾಗಿ ಬಂದರೆ, ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿದ ಗ್ರಾಹಕರಿಗೆ ಹಣ ವಾಪಸ್ ಆಗುವ ಸಾಧ್ಯತೆ ಇದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಿರುವ ಸರ್ಕಾರ, ಈ ಕುರಿತು ಸಾರ್ವಜನಿಕ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಇಂಡಿಯಾ ಸಲ್ಲಿಸಿದ್ದ ರಿಟ್ ಅಪೀಲು (ಸಂಖ್ಯೆ: 1623/2025) ಕುರಿತು ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠವು ದಿನಾಂಕ 30.09.2025ರಂದು ಮಹತ್ವದ ಆದೇಶ ನೀಡಿದೆ. ನ್ಯಾಯಾಲಯವು ಟಿಕೆಟ್ ದರಕ್ಕೆ ವಿಧಿಸಿದ್ದ ₹200 ಮಿತಿಯ ತಡೆಯಾಜ್ಞೆಯನ್ನು ಮುಂದುವರೆಸಿದೆ. ಆದರೆ, ಅಂತಿಮ ತೀರ್ಪು ಬರುವವರೆಗೆ ಗ್ರಾಹಕರಿಂದ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ನಿರ್ವಹಿಸುವ ಕುರಿತು ಮಲ್ಟಿಪ್ಲೆಕ್ಸ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ನು ರಾಜ್ಯದಲ್ಲಿ ಕಾಂತಾರ ಚಾಪ್ಟರ್ -1 ಸಿನಿಮಾಗೆ ಬೆಂಗಳೂರು ಮಲ್ಟಿಪ್ಲೆಕ್ಸ್‌ನಲ್ಲಿ ಕನಿಷ್ಠ 350 ರೂ.ನಿಂದ 1,200 ರೂ.ವರೆಗೆ ಟಿಕೆಟ್ ನಿಗದಿ ಮಾಡಲಾಗಿದೆ. ಕೋರ್ಟ್ ಆದೇಶ ಸರ್ಕಾರ ಪರವಾದರೆ ಬಾಕಿ ಹಣ ವಾಪಸ್ ವೀಕ್ಷಕರಿಗೆ ಬರಲಿದೆ.

ಹೈಕೋರ್ಟ್‌ನ ಪ್ರಮುಖ ನಿರ್ದೇಶನಗಳು:
ದಾಖಲೆ ನಿರ್ವಹಣೆ ಕಡ್ಡಾಯ: ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ತಾವು ಮಾರಾಟ ಮಾಡುವ ಪ್ರತಿ ಟಿಕೆಟ್‌ನ ಸಮಗ್ರ ಮತ್ತು ಪರಿಶೋಧಿಸಬಹುದಾದ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಇದರಲ್ಲಿ ದಿನಾಂಕ, ಸಮಯ, ಬುಕ್ಕಿಂಗ್ ವಿಧಾನ (ಆನ್‌ಲೈನ್/ಕೌಂಟರ್), ಪಾವತಿ ವಿಧಾನ, ಸಂಗ್ರಹಿಸಿದ ಮೊತ್ತ ಮತ್ತು ಜಿಎಸ್‌ಟಿ ಘಟಕವನ್ನು ಸ್ಪಷ್ಟವಾಗಿ ನಮೂದಿಸಬೇಕು.

ನಗದು ವಹಿವಾಟಿಗೆ ಡಿಜಿಟಲ್ ರಸೀದಿ: ನಗದು ವಹಿವಾಟುಗಳಿಗೆ ಡಿಜಿಟಲ್ ರಸೀದಿಗಳನ್ನು ನೀಡಬೇಕು. ದೈನಂದಿನ ನಗದು ರಿಜಿಸ್ಟರ್‌ಗಳಿಗೆ ವ್ಯವಸ್ಥಾಪಕರು ಸಹಿ ಮಾಡಬೇಕು.

ಅಂತಿಮ ತೀರ್ಪು ವಿರುದ್ಧವಾದರೆ ಹಣ ವಾಪಸ್: ಅಂತಿಮ ಆದೇಶದಲ್ಲಿ ಅರ್ಜಿದಾರರಿಗೆ (ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಇಂಡಿಯಾ) ಹಿನ್ನಡೆಯಾದಲ್ಲಿ, ಈ ವಿವಾದದ ಅವಧಿಯಲ್ಲಿ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲಾ ಹೆಚ್ಚುವರಿ ಮೊತ್ತವನ್ನು (ಜಿಎಸ್‌ಟಿ ಹೊರತುಪಡಿಸಿ) ಟಿಕೆಟ್ ಕಾಯ್ದಿರಿಸಲು ಬಳಸಿದ ಅದೇ ಪಾವತಿ ವಿಧಾನದ ಮೂಲಕ ವೈಯಕ್ತಿಕ ಗ್ರಾಹಕರಿಗೆ ಹಿಂದಿರುಗಿಸಬೇಕು.

ಸಾರ್ವಜನಿಕರಿಗೆ ಸರ್ಕಾರದ ಸೂಚನೆ:
ಹೈಕೋರ್ಟ್‌ನ ಈ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಗ್ರಾಹಕರ ಹಿತ ಕಾಯಲು ಗಟ್ಟಿ ನಿರ್ಧಾರಕ್ಕೆ ಮುಂದಾಗಿದೆ. 200 ಟಿಕೆಟ್ ದರ ನಿಗದಿಗೆ ಬದ್ಧವಾಗಿರುವ ಸರ್ಕಾರ, ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಹತ್ವದ ಸೂಚನೆ ನೀಡಿದೆ. ಸಾರ್ವಜನಿಕರು ಮಾನ್ಯ ನ್ಯಾಯಾಲಯದ ತೀರ್ಪಿನನ್ವಯ, ಹಾಲಿ ಚಲನಚಿತ್ರ ಪ್ರದರ್ಶನಕ್ಕೆ ನೀಡಿರುವ ದರಕ್ಕೆ ಸಂಬಂಧಿಸಿದಂತೆ ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪಡೆದ ಟಿಕೆಟ್‌ಗಳನ್ನು ಭದ್ರವಾಗಿ ಕಾಯ್ದಿರಿಸಿಕೊಳ್ಳಬೇಕು.

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಸಹ ಎಲ್ಲಾ ರೀತಿಯಾ ಸಿನಿಮಾ ಟಿಕೆಟ್‌ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಒಂದು ವೇಳೆ ಅಂತಿಮ ತೀರ್ಪಿನಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಹಿನ್ನಡೆಯಾದರೆ, ಗ್ರಾಹಕರಿಂದ ಸಂಗ್ರಹಿಸಿದ ಹೆಚ್ಚುವರಿ ಹಣವನ್ನು ಅವರಿಗೆ ಮರಳಿ ಪಾವತಿಸಲು ಅನುಕೂಲವಾಗುವಂತೆ ಈ ನಿರ್ದೇಶನಗಳನ್ನು ನೀಡಲಾಗಿದೆ. ಗ್ರಾಹಕರು ತಾವು ಹೆಚ್ಚುವರಿ ಹಣ ನೀಡಿ ಖರೀದಿಸಿದ ಟಿಕೆಟ್ ದಾಖಲೆಗಳನ್ನು ಇಟ್ಟುಕೊಂಡರೆ, ತೀರ್ಪಿನ ನಂತರ ಹಣ ಮರಳಿ ಪಡೆಯಲು ಸಾಧ್ಯವಾಗುತ್ತದೆ.

ರಿಫಂಡ್ ಯೋಜನೆ ಸಲ್ಲಿಕೆ ಕಡ್ಡಾಯ
ಅಂತಿಮವಾಗಿ ತೀರ್ಪು ಸರ್ಕಾರದ ಪರವಾಗಿ ಬಂದಲ್ಲಿ, ಮಲ್ಟಿಪ್ಲೆಕ್ಸ್‌ಗಳು 45 ದಿನಗಳೊಳಗೆ ರಿಫಂಡ್ ಪ್ರಕ್ರಿಯೆ ಯೋಜನೆಯನ್ನು ಪರವಾನಗಿ ಪ್ರಾಧಿಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಬೇಕು ಮತ್ತು ಅದನ್ನು ಹೈಕೋರ್ಟ್‌ಗೆ ಮಂಡಿಸಬೇಕು ಎಂದೂ ನ್ಯಾಯಾಲಯವು ಆದೇಶಿಸಿದೆ. ಸರ್ಕಾರದ ಈ ಕ್ರಮದಿಂದಾಗಿ, ದುಬಾರಿ ಟಿಕೆಟ್ ದರದಿಂದ ಬೇಸತ್ತಿದ್ದ ಗ್ರಾಹಕರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.

error: Content is protected !!