ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಪತ್ರಕರ್ತ, ಲೇಖಕ ಮತ್ತು ಅಂಕಣಕಾರ ಟಿ.ಜೆ.ಎಸ್. ಜಾರ್ಜ್(97) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅವರಿಗೆ 97 ವರ್ಷ ವಯಸ್ಸಾಗಿತ್ತು. 1928ರಲ್ಲಿ ಕೇರಳದಲ್ಲಿ ಜನಿಸಿದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2011ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿತ್ತು. ಪತ್ರಕರ್ತರಿಗೆ ಕೇರಳ ಸರ್ಕಾರ ನೀಡುವ ಅತೀ ದೊಡ್ಡ ಪುರಸ್ಕಾರ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿ 2019ರಲ್ಲಿ ಟಿ.ಜೆ.ಎಸ್. ಜಾರ್ಜ್ ಅವರನ್ನು ಅರಸಿಕೊಂಡು ಬಂದಿತ್ತು.
ದಶಕಗಳ ಕಾಲ ಅವರು ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್, ದಿ ಸರ್ಚ್‌ಲೈಟ್, ಫಾರ್ ಈಸ್ಟರ್ನ್ ಎಕನಾಮಿಕ್ ರಿವ್ಯೂಗಳಿಗೆ ಬರೆದಿದ್ದರು. ಹಾಂಗ್ ಕಾಂಗ್‌ನಲ್ಲಿ ಏಷ್ಯಾವೀಕ್‌ನ ಸ್ಥಾಪಕ ಸಂಪಾದಕರಾದರು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ಸಲಹೆಗಾರರಾಗಿ ಜಾರ್ಜ್ ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದರು.
ಸಾಪ್ತಾಹಿಕ ಅಂಕಣ ‘ಪಾಯಿಂಟ್ ಆಫ್ ವ್ಯೂ‘ 25 ವರ್ಷಗಳ ಕಾಲ ಬರೆದಿದ್ದರು. ಜೂನ್ 2022 ರಲ್ಲಿ ಕೊನೆಯ ಬಾರಿ ಬರೆದು ತಮ್ಮ ಅಂಕಣ ಬರಹಕ್ಕೆ ಪೂರ್ಣ ವಿರಾಮ ಹಾಕಿದರು. 1,300 ವಾರಗಳ ಕಾಲ ನಿರಂತರ ಅಂಕಣ ಬರೆದಿದ್ದ ಇವರು ನೂರಾರು ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದರು.