Wednesday, October 8, 2025

ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆ ಕೆಆರ್‌ಎಸ್‌ನಲ್ಲಿ ಐತಿಹಾಸಿಕ ಕಾವೇರಿ ಆರತಿಯನ್ನು‌ ಅಭೂತಪೂರ್ಣವಾಗಿ ನೆರವೇರಿಸಿದ ಪಂಡಿತ, ಪುರೋಹಿತರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸನ್ಮಾನಿಸಿದರು.

ಮಂಡ್ಯ ಜಿಲ್ಲೆ ಕೆಆರ್‌ಎಸ್‌ನ ಬೃಂದಾವನ ಉದ್ಯಾನದಲ್ಲಿ ಸತತ 5 ದಿನಗಳ ಕಾಲ ಕಾವೇರಿ ಆರತಿಯಲ್ಲಿ ಪಾಲ್ಗೊಂಡ 55 ಮಂದಿ ಅರ್ಚಕರನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ಕುಮಾರಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಶುಕ್ರವಾರ ಫಲ, ತಾಂಬೂಲ, ವಸ್ತ್ರ ನೀಡಿ ಸಾಂಪ್ರದಾಯಿಕವಾಗಿ ಅಭಿನಂದಿಸಿದರು.

ತಮ್ಮನ್ನು ಸನ್ಮಾನಿಸಿ ಸತ್ಸಂಪ್ರದಾಯ ಮೆರೆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕಾವೇರಿ ಆರತಿ ಪ್ರಧಾನ ಅರ್ಚಕ ವಿಜಯಕುಮಾರ್ ಪಂಡಿತ್ ಅವರು ಆಶೀರ್ವದಿಸಿದರು.

ಈ ಸಂದರ್ಭ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ʼಕಾವೇರಿ ಆರತಿಯನ್ನು ನಿಲ್ಲಿಸುವುದಿಲ್ಲ,‌ ಮುಂದುವರಿಸುತ್ತೇವೆ.‌ ಪ್ರಯತ್ನಕ್ಕೆ ಸೋಲಾಗಬಹುದು ಪ್ರಾರ್ಥನೆಗೆ ಸೋಲಾಗುವುದಿಲ್ಲ.‌ ನಾವೆಲ್ಲರೂ ‌ಸೇರಿ ಪ್ರಾರ್ಥನೆ ಸಲ್ಲಿಸೋಣ.‌ ಆರತಿಗಾಗಿ ಸ್ಟೇಡಿಯಂ ಮಾದರಿ ಮಂಟಪ ನಿರ್ಮಾಣ‌‌ ಮಾಡೋಣ‌ʼ ಎಂದರು.

ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಕಾವೇರಿ ಆರತಿ ನಡೆಯಲಿದೆ. ಇದರಿಂದ ಪುರೋಹಿತರಿಗೆ, ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು. ನಾನು ಅಥವಾ ಇನ್ಯಾರೋ ಪುರೋಹಿತರಾಗಲು ಸಾಧ್ಯವಿಲ್ಲ. ನೀವೇ ಆ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ‌ಬೆಳಗ್ಗೆ ಹೊತ್ತು ಭಕ್ತಾದಿಗಳು ಕಾವೇರಿಗೆ ಪೂಜೆ ಸಲ್ಲಿಸುವ ರೀತಿಯಲ್ಲೂ ವ್ಯವಸ್ಥೆ ಮಾಡಲಾಗುವುದು. ವಾರ ಪೂರ್ತಿ ಆರತಿ ಕಾರ್ಯಕ್ರಮ ನಡೆಯಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ತಿಳಿಸಿದರು.

ಕಾವೇರಿ ಆರತಿ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಜೀವನದಿ ಕಾವೇರಿಗೆ ಪೂಜೆ ಸಲ್ಲಿಸುವ ಭಾಗ್ಯ ನಮಗೆ ಹಾಗೂ ನಿಮಗೆ ಸಿಕ್ಕಿದೆ. ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಲು ಕೆಲವರು ಅಡಚಣೆ ಮಾಡುತ್ತಿದ್ದಾರೆ. ಅಡಚಣೆ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ ಎಂದರು.

ಕಾವೇರಿ ಮಾತೆ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಸ್ಥಳೀಯ ಪುರೋಹಿತರು ತಮ್ಮ ಪಾಂಡಿತ್ಯ ಬಳಸಿಕೊಂಡು ಇನ್ನೂ ಯಾವ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಬಹುದು ಎಂದು ಪರಿಶೀಲನೆ ನಡೆಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

error: Content is protected !!