ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇಬಾಗೇವಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಜಮೀನುಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ಬಿಜೆಪಿ ನಾಯಕರ ತಂಡ ಭೇಟಿ ನೀಡಿ ಬೆಳೆಹಾನಿ ಕುರಿತು ವಸ್ತುಸ್ಥಿತಿ ಪರಿಶೀಲಿಸಿದರು.
ಈ ವೇಳೆ ಸಂಸದ ರಮೇಶ್ ಜಿಗಿಜಿಣಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ್ ಪಾಟೀಲ್, ದುರ್ಯೋಧನ ಐಹೊಳೆ, ಸಿದ್ದು ಸವದಿ, ವಿಠ್ಠಲ್ ಹಲಗೇಕರ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಸೇರಿದಂತೆ ಮಾಜಿ ಶಾಸಕರು ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆರ್. ಅಶೋಕ, ಬೆಳೆ ಹಾನಿಗೊಳಗಾದ ರೈತರಿಗೆ ಧೈರ್ಯ ಹೇಳಿ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಒಳಗಾಗಿರುವ ಜನರು ಮತ್ತು ರೈತರ ನೆರವಿಗೆ ಧಾವಿಸುವುದು ಅಗತ್ಯವಾಗಿದೆ. ಜೊತೆಗೆ ಶೀಘ್ರದಲ್ಲೇ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಬಳಿಕ ಆರ್. ಅಶೋಕ, ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಭೂಕುಸಿತ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಬಾಧಿತ ಜನರ ನೆರವಿಗೆ ಬಂದಿಲ್ಲ. ಮಳೆಯಿಂದಾಗಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯೊಂದರಲ್ಲೇ 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ರಾಜ್ಯ ಸರ್ಕಾರ ಆರಂಭಿಸಿದ ಆಶ್ರಯ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದೆ ಮುಚ್ಚುವ ಹಂತಕ್ಕೆ ಬಂದಿವೆ. ತೊಂದರೆಗೊಳಗಾದ ಜನರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ತನ್ನ ಕರ್ತವ್ಯವವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ ಬಿಜೆಪಿ ನಾಯಕರು ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವ ಅಗತ್ಯ ಇರುತ್ತಿರಲಿಲ್ಲ ಎಂದು ಹೇಳಿದರು.
