ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಡವರು, ದುರ್ಬಲ ವರ್ಗದವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಸಬಲಗೊಂಡು ಮುಖ್ಯವಾಹಿನಿಗೆ ಬಂದಾಗ ಅಸಮಾನತೆ ತೊಡೆದುಹಾಕಲು ಸಾಧ್ಯವಿದೆ. ವರ್ಗದಲ್ಲಿ ಶಕ್ತಿ ತುಂಬುವ ಸಲುವಾಗಿ ಸರ್ಕಾರ ಗ್ಯಾರಂಟಿಯಂಥ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಡವರಿಗೆ ಅತ್ಯುತ್ತಮವಾದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು, ಇಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ಕಟ್ಟಡ ಹಾಗೂ ಗೃಹ ವೈದ್ಯರ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಪ್ರಧಾನ ಮಂತ್ರಿ ಉಷಾ ಯೋಜನೆಯಡಿ ನಿರ್ಮಿತವಾಗುತ್ತಿರುವ ವಿವಿಧ ಕಟ್ಟಡಗಳ ಶಂಕುಸ್ಥಾಪನೆ ಬೆಳಗಾವಿಯಲ್ಲಿ ನೆರವೇರಿಸಿ ಮಾತನಾಡಿದರು.
ಬಡವರ ಮಕ್ಕಳು ವೈದ್ಯರಾಗಬೇಕೆಂಬ ಉದ್ದೇಶದಿಂದ ೨೨ ಜಿಲ್ಲೆಗಳಲ್ಲಿ ನೂತನ ಸರ್ಕಾರಿ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹಂತಹಂತವಾಗಿ ವೈದ್ಯರ ಅವಶ್ಯಕತೆ ಪೂರೈಸಲಾಗುವುದು. ಬೆಳಗಾವಿಗೆ ಒಂದು ನೂರು ಎಲೆಕ್ಟ್ರಿಕ್ ಬಸ್‌ಗಳ ಸೌಕರ್ಯ ಒದಗಿಸಲಾಗುವುದು. ಶಕ್ತಿ ಯೋಜನೆಯಿಂದ ಇದುವರೆಗೆ ೫೫೪ ಕೋಟಿ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯ ದುಬಾರಿ ವೆಚ್ಚವನ್ನು ತಗ್ಗಿಸುವ ಹಿನ್ನಲೆಯಲ್ಲಿ ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಈ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ದೊರೆಯುವುದರ ಮೂಲಕ ಬಡವರಿಗೆ ಮತ್ತು ಸಾಮಾನ್ಯರಿಗೆ ಕಾಮಧೇನು ಆಗಲಿದೆ. ಆಸ್ಪತ್ರೆ ಸಂಪೂರ್ಣವಾಗಿ ಸರ್ಕಾರದ ಸುಪರ್ದಿಯಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಬೆಳಗಾವಿಯಲ್ಲಿ 18 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಸದ್ಯದಲ್ಲಿಯೇ ರಾಜ್ಯದಲ್ಲಿ 2 ಸಾವಿರ ನೂತನ ಬಸ್‌ಗಳನ್ನು ನೀಡಲಾಗುತ್ತಿದ್ದು, ವಾಯುವ್ಯ ಸಾರಿಗೆ ವಿಭಾಗಕ್ಕೆ ಏಳನೂರು ಬಸ್ಸಗಳು ದೊರೆಯಲಿವೆ. ಶಕ್ತಿ ಯೋಜನೆಯಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ತಿಳಿಸಿದರು.