ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಶಾರದೋತ್ಸವ ಧಾರ್ಮಿಕ ಆಚರಣೆಯ ಜೊತೆ ಉಳ್ಳಾಲ ಪ್ರದೇಶದ ಸೌಹಾರ್ಧತೆಯ ಸಂಕೇತವೂ ಆಗಿದೆ. ಮೊನ್ನೆ ನಡೆದ ಶಾರದೋತ್ಸವ ಶೋಭಾಯಾತ್ರೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ನಡೆದ ಘರ್ಷಣೆ ಮತ್ತು ಪ್ರತಿಭಟನೆ ವಿಷಾದನೀಯ. ಘಟನೆಗೆ ಕೆಲ ಪೊಲೀಸರ ದುರ್ವರ್ತನೆಯೇ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರ ಬಗ್ಗೆ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಕಾನ್ಫರೆನ್ಸ್ ನಲ್ಲಿರುವ ಯು.ಟಿ. ಖಾದರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರಿಗೆ ನಿರ್ದೇಶನ ನೀಡಿದ್ದಾರೆ.
ಉಳ್ಳಾಲದಲ್ಲಿ ಕಳೆದ 78 ವರ್ಷಗಳಿಂದ ಶಾರದೋತ್ಸವ ಶೋಭಾಯಾತ್ರೆಯು ಅತ್ಯಂತ ಶ್ರದ್ಧೆ, ಪಾವಿತ್ರ್ಯತೆಯಿಂದ ನಡೆದುಕೊಂಡು ಬಂದಿದೆ. ಇಂತಹ ಶೋಭಾಯಾತ್ರೆಯು ಕೆಲಕಾಲ ಸ್ಥಗಿತಗೊಂಡು ಗೊಂದಲ ಉಂಟಾಗಿರುವುದು ವಿಷಾದನೀಯ. ಧಾರ್ಮಿಕ ನಂಬಿಕೆ, ಆಚರಣೆಗಳಿಗೆ ಎಂದಿಗೂ ಅಡ್ಡಿಯಾಗಬಾರದು. ಅಮಾಯಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿಯೆಂದು ಖಾದರ್ ಹೇಳಿದ್ದಾರೆ.
ಕಳೆದ ಗುರುವಾರ ರಾತ್ರಿ ಉಳ್ಳಾಲದಲ್ಲಿ ನಡೆದ ದಸರಾ ಶೋಭಾಯಾತ್ರೆಯಲ್ಲಿ ಪೊಲೀಸರು ಟ್ಯಾಬ್ಲೋಗಳ ಧ್ವನಿವರ್ಧಕಗಳನ್ನ ಆಫ್ ಮಾಡಿದ್ದರು. ಈ ವೇಳೆ ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ನಡೆದಿತ್ತು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಬ್ಬರು ಅಮಾಯಕರನ್ನ ಸೇರಿಸಿ ಒಟ್ಟು ಮೂವರು ಯುವಕರನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿರಿಸಿದ್ದರು. ಅಮಾಯಕರ ಬಂಧನ ಖಂಡಿಸಿ ಸಮಾರು ಮೂರೂವರೆ ಗಂಟೆಗಳ ಕಾಲ ಶಾರದಾ ವಿಗ್ರಹವನ್ನ ರಸ್ತೆಯಲ್ಲಿರಿಸಿದ ಸಾರ್ವಜನಿಕರು ಉಳ್ಳಾಲ ಠಾಣೆಯ ಮುಂಭಾಗದಲ್ಲಿ ನೆರೆದು ಪ್ರತಿಭಟಿಸಿದ್ದರು.
ಬಿಜೆಪಿ ಮುಖಂಡರ ಮಧ್ಯ ಪ್ರವೇಶ ಮತ್ತು ಭಾರೀ ಪ್ರತಿಭಟನೆಗೆ ಮಣಿದ ಪೊಲೀಸರು ಇಬ್ಬರು ಅಮಾಯಕ ಯುವಕರನ್ನ ಬಿಟ್ಟು ಕಳುಹಿಸಿದ್ದರು.