ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವೈಜ್ಞಾನಿಕ ಬೈಂದೂರು ಪಟ್ಟಣ ಪಂಚಾಯಿತಿ ರಚನೆ ರದ್ದುಪಡಿಸುವಂತೆ ಆಗ್ರಹಿಸಿ ಬಿಜೆಪಿ, ಕಿಸಾನ್ ಘಟಕ ವತಿಯಿಂದ ಬೈಂದೂರಿನಲ್ಲಿಂದು ಬೃಹತ್ ಪ್ರತಿಭಟನೆ ಹಾಗೂ ಜಾಥಾ ನಡೆಯಿತು. ಈ ವೇಳೆ ಶಾಸಕ ಗುರುರಾಜ್ ಗಂಟಿಹೊಳೆ, ಹಿರಿಯ ಕುಮ್ಕಿ ಹೋರಾಟಗಾರ ಎಂ.ಪಿ. ಸತ್ಯನಾರಾಯಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಬಟ್ವಾಡಿ, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಗೋಪೂಜೆ ನೆರವೇರಿಸಿದರು. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಗುರುರಾಜ್ ಗಂಟಿಹೊಳೆ, 94ಸಿ, ಅಕ್ರಮ-ಸಕ್ರಮ, ಬಗರ್ ಹುಕುಂ ಸಮಿತಿಗಳಿಗೆ ಕುಮ್ಕಿ ಹಕ್ಕು ನೀಡುತ್ತಿಲ್ಲ. ಪಟ್ಟಣ ಪಂಚಾಯಿತಿ ರಚನೆ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶಗಳು ಸೇರ್ಪಡೆಯಾಗಿರುವುದನ್ನು ಕೈಬಿಡಬೇಕು. ರೈತರ ಹಕ್ಕುಗಳು ಯಾವುದೇ ಕಾರಣಕ್ಕೂ ಮೊಟಕಾಗಬಾರದು ಎನ್ನುವ ಹಕ್ಕೋತ್ತಾಯ ನಮ್ಮದು. ರೈತರ ಪರವಾಗಿ ಸದಾ ಪಕ್ಷ ನಿಲ್ಲಲಿದೆ ಎಂದು ಅವರು ತಿಳಿಸಿದರು. ಪ್ರಗತಿಪರ ಕೃಷಿಕ ರಾಜು ಗಾಣಿಗ, ಪಟ್ಟಣ ಪಂಚಾಯಿತಿ ಆಗಿರುವುದರಿಂದ ಗ್ರಾಮಾಂತರ ಪ್ರದೇಶದ ಅನೇಕ ಜನರಿಗೆ ಅನಾನುಕೂಲವಾಗಲಿದೆ ಎಂದು ಹೇಳಿದರು.
ಅವೈಜ್ಞಾನಿಕ ಬೈಂದೂರು ಪಟ್ಟಣ ಪಂಚಾಯಿತಿ ರಚನೆ ರದ್ದುಪಡಿಸುವಂತೆ ಆಗ್ರಹಿಸಿ ಬಿಜೆಪಿ, ಕಿಸಾನ್ ಘಟಕ ಪ್ರತಿಭಟನೆ, ಜಾಥಾ
