Sunday, October 12, 2025

CINE | ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುತ್ತಿರೋ ‘ಕಾಂತಾರ-1’: ಮೂರನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ‘ಕಾಂತಾರ: ಚಾಪ್ಟರ್ 1’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಗಳಿಸಿದೆ. ಬಿಡುಗಡೆ ಆದ ಮೊದಲ ಮೂರು ದಿನಗಳಲ್ಲಿ ದೇಶದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಕ್ಟೋಬರ್ 1ರ ಸಂಜೆ ಆಯ್ದ ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ನಡೆದಿದ್ದ ಈ ಚಿತ್ರ, ಅಕ್ಟೋಬರ್ 2ರಂದು ಸಾವಿರಾರು ಪರದೆಗಳಲ್ಲಿ ಭವ್ಯವಾಗಿ ಬಿಡುಗಡೆಯಾಯಿತು. ಮೊದಲ ದಿನವೇ ಚಿತ್ರವು 61.85 ಕೋಟಿ ರೂಪಾಯಿ ಗಳಿಸಿತು. ಎರಡನೇ ದಿನ 46 ಕೋಟಿ ರೂಪಾಯಿ ಮತ್ತು ಮೂರನೇ ದಿನ 55.25 ಕೋಟಿ ರೂಪಾಯಿ ಸಂಗ್ರಹಿಸಿ, ಮೂರು ದಿನಗಳಲ್ಲೇ ಒಟ್ಟು 163.1 ಕೋಟಿ ರೂಪಾಯಿ ಕಲೆಕ್ಷನ್ ದಾಖಲಿಸಿದೆ. ಭಾನುವಾರದ ಗಳಿಕೆ ಸೇರಿ, ಚಿತ್ರವು 200 ಕೋಟಿಗೂ ಮೀರಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.

‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಭವ್ಯ ಚಿತ್ರ ನೂರಾರು ಕೋಟಿ ಬಜೆಟ್‌ನಲ್ಲಿ ಮೂಡಿ ಬಂದಿದೆ. ಅದಕ್ಕೆ ತಕ್ಕಂತೆ ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದ್ದು, ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಉತ್ತಮ ವಿಮರ್ಶೆಗಳು ಹರಿದುಬರುತ್ತಿದ್ದು, ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕನ್ನಡದ ಜೊತೆಗೆ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆಯಾಗಿ, ಹಿಂದಿ ಆವೃತ್ತಿಯೂ ಉತ್ತಮ ಸಂಗ್ರಹ ಮಾಡುತ್ತಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿಯ ಜೊತೆಗೆ ಗುಲ್ಶನ್ ದೇವಯ್ಯ, ಪ್ರಕಾಶ್ ತುಮಿನಾಡು, ಜಯರಾಮ್, ರಾಕೇಶ್ ಪೂಜಾರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

error: Content is protected !!