Monday, October 13, 2025

ಕರ್ನಾಟಕದಲ್ಲಿ ಕೆಮ್ಮಿನ ಸಿರಪ್‌ಗಳ ಮೇಲೆ ಕಟ್ಟುನಿಟ್ಟಿನ ನಿಗಾ: ದಿನೇಶ್ ಗುಂಡೂರಾವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ರಾಜ್ಯಗಳಲ್ಲಿ ಕೆಮ್ಮಿನ ಸಿರಪ್‌ ನಿಂದಾಗಿ ಮಕ್ಕಳು ಮೃತಪಟ್ಟ ಘಟನೆಗಳನ್ನು ಗಮನಿಸಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಕೋಲ್ಡ್ ಸಿರಪ್‌ ಮೇಲೆ ಕಡ್ಡಾಯ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ರಾಜ್ಯಕ್ಕೆ ಕೋಲ್ಡ್ ಸಿರಪ್‌ (ಕೋಲ್ಡ್ರೀಫ್ ಕಫ್ ಸಿರಪ್) ಪೂರೈಕೆ ಆಗಿಲ್ಲ. ಆದರೆ ಖಾಸಗಿ ಮಾರ್ಗದಿಂದ ಬಂದಿದೆಯೇ ಎಂಬುದು ಅಧಿಕಾರಿಗಳ ಪರಿಶೀಲನೆಯಿಂದ ಸ್ಪಷ್ಟವಾಗಬೇಕಿದೆ.

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವರು, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ ಬೇರೆ ಬ್ರಾಂಡ್‌ಗಳ ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಪರೀಕ್ಷೆ ವರದಿ ಬಂದ ನಂತರ, ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲಾಗುವುದು. ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಈ ಸಿರಪ್‌ ಪೂರೈಕೆ ಆಗಿದ್ದು, ಲ್ಯಾಬ್ ವರದಿಗಳಲ್ಲಿ ಇದರಿಂದ ತೊಂದರೆ ಉಂಟಾಗಿದೆ ಎಂಬುದು ದೃಢಪಟ್ಟಿದೆ. ಈ ಕಾರಣದಿಂದಾಗಿ ಕಂಪನಿಯ ಉಲ್ಲೇಖಿತ ಉತ್ಪಾದನೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಮತ್ತು ದೇಶಾದ್ಯಂತ ಮಾರಾಟ ನಿಷೇಧಿಸಲಾಗಿದೆ.

ರಾಜ್ಯದಲ್ಲಿ ಔಷಧ ತಯಾರಿಕಾ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ, ಔಷಧಿಗಳ ಪರೀಕ್ಷೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇಂತಹ ಕಠಿಣ ನಿಯಂತ್ರಣವಿಲ್ಲ ಎಂದು ಗುರುತಿಸಲಾಗಿದ್ದು, ಕೇಂದ್ರ ಸರ್ಕಾರವು ಕರ್ನಾಟಕ ಮಾದರಿಯನ್ನು ಎಲ್ಲಾ ರಾಜ್ಯಗಳಿಗೆ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

error: Content is protected !!