Monday, October 13, 2025

ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ: ಕೇಂದ್ರಕ್ಕೆ ಶಿಫಾರಸ್ಸು ಮಾಡುವೆ ಎಂದ ಸಿಎಂ ಸಿದ್ಧರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಶ್ವಗುರು ಬಸವಣ್ಣ ಅವರನ್ನು ‘ಕರ್ನಾಟಕ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿದ್ಯದಲ್ಲಿ ಸಮುದಾಯದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿಯ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ. ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದರು.

ಜಾತಿಯಿಂದ ಯಾರೂ ಶ್ರೇಷ್ಠರಲ್ಲ. ಹಾಗೆಯೇ ಪ್ರತಿಭೆ, ಜ್ಞಾನ ಕೂಡ ಯಾವುದೇ ಒಂದು ಜಾತಿಯ ಸ್ವತ್ತು ಅಲ್ಲ. ನಾನು ಅರ್ಜಿ ಹಾಕಿಕೊಂಡು ಕುರುಬ ಜಾತಿಯಲ್ಲಿ ಹುಟ್ಟಿಲ್ಲ. ನಾನು ಶೂದ್ರ ಎನ್ನುವ ಕಾರಣಕ್ಕೆ ಶಿಕ್ಷಣ ಪಡೆಯುವ ಅರ್ಹತೆ ಇಲ್ಲ ಎನ್ನುವುದು ಪಟ್ಟಭದ್ರರ ಷಡ್ಯಂತ್ರ ಎಂದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ. ಜಾತಿ ವ್ಯವಸ್ಥೆ, ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ

ಜಾತಿ-ವರ್ಗ ರಹಿತ ಮಾನವ ಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ನಾವೆಲ್ಲರೂ ಮೊದಲು ಮನುಷ್ಯರು, ಬಳಿಕ ಭಾರತೀಯರು. ಹೀಗಾಗಿ ನಾವು ಮನುಷ್ಯ ನಿರ್ಮಿತ ಜಾತಿ, ಧರ್ಮದ, ಅಸಮಾನತೆಯ ತಾರತಮ್ಯಗಳನ್ನು ಸಹಿಸಬಾರದು, ಆಚರಿಸಬಾರದು ಎಂದು ಕರೆ ನೀಡಿದರು.

ನಾನು ಕಾನೂನು ವಿದ್ಯಾರ್ಥಿ ಆದ ಗಳಿಗೆಯಿಂದ ನಾನು ಬಸವಣ್ಣನವರ ಅನುಯಾಯಿ. ಅಂಬೇಡ್ಕರ್ ಅವರೂ ತಮ್ಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿದ್ದೇವೆ ಎಂದರು.

ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ ಆದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ. ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಗಳಾಗುತ್ತೇವೆ ಎಂದರು.

error: Content is protected !!