ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲಂಬೊದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಬೆನ್ನಲ್ಲೇ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮದಲ್ಲಿ “ಮತ್ತೊಂದು ಸಂಡೆ” ಟ್ವೀಟ್ ಮೂಲಕ ಪಾಕಿಸ್ತಾನಿಗಳನ್ನು ಕಿಚಾಯಿಸಿ ಗಮನ ಸೆಳೆದಿದ್ದಾರೆ.
ಇರ್ಫಾನ್ ಪಠಾಣ್ 2022 ರಿಂದ ಪ್ರತಿ ಬಾರಿ ಭಾರತ ತಂಡ ಪಾಕ್ ವಿರುದ್ಧ ಜಯಿಸಿದಾಗ ಪಾಕಿಸ್ತಾನಿಗಳ ಮೇಲೆ ಪರೋಕ್ಷವಾಗಿ ಟೀಟ್ ಮಾಡುವ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ. 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ್ ತಂಡವನ್ನು ಸೋಲಿಸಿದ ಬಳಿಕ ಅವರು ನೆರೆಹೊರೆಯವರ ಭಾನುವಾರ ಹೇಗಿತ್ತು ಎಂದು ಟ್ವೀಟ್ ಮಾಡಿ ವೈರಲ್ ಆಗಿದ್ದರು. ಇಂದಿಗೂ ಅವರು ಈ ರೂಢಿಯನ್ನು ಮುಂದುವರೆಸಿದ್ದಾರೆ.
ಈ ಬಾರಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 247 ರನ್‌ಗಳನ್ನು ಕಲೆಹಾಕಿತ್ತು. ಬೆನ್ನತ್ತಿದ ಪಾಕಿಸ್ತಾನ್ ತಂಡವು 43 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ ತಂಡ 88 ರನ್‌ಗಳ ಅಮೋಘ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಇರ್ಫಾನ್ ಪಠಾಣ್ “ಇಟ್ಸ್, ಸ್ಲೀಪ್, ವಿನ್, ರಿಪೀಟ್” ಎಂದು ಟ್ವೀಟ್ ಮಾಡಿ ಪಾಕಿಸ್ತಾನಿಗಳನ್ನು ಕಿಚಾಯಿಸಿದ್ದಾರೆ.