ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿನ್ಯ ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಬಿಗ್ಬಾಸ್ ಮನೆ ಇರುವ ಜಾಲಿವುಡ್ ಸ್ಟುಡಿಯೋ ಅನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿದ್ದ ಎಲ್ಲ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲರನ್ನೂ ರಾಮನಗರದ ಬಳಿಕ ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿದೆ. ಆದರೆ ರೆಸಾರ್ಟ್ನಲ್ಲಿಯೂ ಸಹ ಬಿಗ್ಬಾಸ್ ಸ್ಪರ್ಧಿಗಳಿಗೆ ಕೆಲವು ಕಠಿಣ ನಿಯಮಗಳನ್ನು ಹೇರಲಾಗಿದೆ.
ಈಗಲ್ ಟನ್ ರೆಸಾರ್ಟ್ನಲ್ಲಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸುಮಾರು 12 ಕೋಣೆಗಳನ್ನು ಸ್ಪರ್ಧಿಗಳಿಗಾಗಿ ಬುಕ್ ಮಾಡಲಾಗಿದೆ. 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿ ಇರಿಸಲಾಗಿದೆ. ಲಭ್ಯವಿರುವ ಮಾಹಿತಿಯಂತೆ, ಬಿಗ್ಬಾಸ್ ಸ್ಪರ್ಧಿಗಳ ಕೋಣೆಯಲ್ಲಿರುವ ಟಿವಿಗಳನ್ನು ತೆಗೆದು ಹಾಕಲಾಗಿದೆ. ಹೊರಗಿನ ಪ್ರಪಂಚದೊಂದಿಗೆ ಸಂಪರ್ಕವಿಲ್ಲದೆ ಬಿಗ್ಬಾಸ್ ಸ್ಪರ್ಧಿಗಳು ರೆಸಾರ್ಟ್ನಲ್ಲಿ ಇರಬೇಕಿದೆ.
ನಿನ್ನೆ ರೆಸಾರ್ಟ್ಗೆ ಕರೆದುಕೊಂಡು ಬಂದ ಬಳಿಕ ಸ್ಪರ್ಧಿಗಳೊಟ್ಟಿಗೆ ಬಿಗ್ಬಾಸ್ ಆಯೋಜಕರು ಸಭೆ ನಡೆಸಿದ್ದು, ಪರಿಸ್ಥಿತಿ ವಿವರಿಸಿದ್ದಾರೆ. ಎಲ್ಲ ಸ್ಪರ್ಧಿಗಳ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಹಾಗೂ ರೆಸಾರ್ಟ್ನಲ್ಲಿ ಇದ್ದಾಗಲೂ ಸಹ ಕೆಲವು ನಿಯಮಗಳ ಪಾಲನೆ ಮಾಡಬೇಕೆಂದು ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಟಿವಿ ವೀಕ್ಷಿಸುವಂತಿಲ್ಲ. ಮೊಬೈಲ್ ಬಳಕೆ ಇಲ್ಲ, ಬಿಗ್ಬಾಸ್ ಸ್ಪರ್ಧಿಗಳು ಮತ್ತು ಆಯೋಜಕರ ಹೊರತಾಗಿ ಇನ್ಯಾರೊಂದಿಗೂ ಸಂಪರ್ಕ ಇರಿಸಿಕೊಳ್ಳುವಂತಿಲ್ಲ. ರೆಸಾರ್ಟ್ನ ಸಿಬ್ಬಂದಿಯ ಜೊತೆಗೂ ಮಾತುಕತೆ ಆಡುವಂತಿಲ್ಲ.
ಆಯೋಜಕರು ಮತ್ತು ಜಾಲಿವುಡ್ ಸ್ಟುಡಿಯೋನವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಒಂದೊಮ್ಮೆ ನ್ಯಾಯಾಲಯದಲ್ಲಿ ಹಿನ್ನಡೆ ಆದಲ್ಲಿ, ಹೊರ ರಾಜ್ಯದಲ್ಲಿ ರೆಡಿ ಇರುವ ಸೆಟ್ಗೆ ಬಿಗ್ಬಾಸ್ ಕನ್ನಡ ಕಾರ್ಯಕ್ರಮವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಸಲಿಗೆ ಆರಂಭದ ಮೂರು ಶೋಗಳು ಹೊರ ರಾಜ್ಯಗಳಲ್ಲಿಯೇ ನಡೆಸಲಾಗಿತ್ತು. ಆ ನಂತರ ಸುದೀಪ್ ಒತ್ತಾಸೆಯ ಕಾರಣಕ್ಕೆ ಕರ್ನಾಟಕದಲ್ಲಿಯೇ ಬಿಗ್ಬಾಸ್ ಮನೆ ನಿರ್ಮಾಣ ಆರಂಭಿಸಲಾಯ್ತು. ಈಗ ಇಲ್ಲಿ ಸಮಸ್ಯೆ ಆಗಿರುವ ಕಾರಣ ಮತ್ತೆ ಹೊರರಾಜ್ಯಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ.