ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಯುವಕರು ವಿದೇಶಗಳಲ್ಲಿ ಉದ್ಯೋಗ ಪಡೆಯಲು ಸರ್ಕಾರ ತ್ವರಿತ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜರ್ಮನ್ ಭಾಷೆಯಲ್ಲಿ ವಿದೇಶಿ ಭಾಷಾ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಕೇಂದ್ರವು ಜರ್ಮನ್ ಭಾಷೆಯಲ್ಲಿ ಕೋರ್ಸ್‌ಗಳನ್ನು ನೀಡುವ ಮತ್ತು ಅಧಿಕೃತ ಪರೀಕ್ಷೆಗಳನ್ನು ನಡೆಸುವ ಏಕೈಕ ಕೇಂದ್ರವಾಗಿದ್ದು, ಗೋಥೆ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು, ಆರೋಗ್ಯ ವೃತ್ತಿಪರರು ಹಾಗೂ ದಾದಿಯರು ವಿದೇಶಗಳಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ತರಬೇತಿ ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಈ ಕೇಂದ್ರದಲ್ಲಿ ಜರ್ಮನ್ ಭಾಷೆ ಹೊರತು ಜಪಾನೀಸ್, ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಗಳ ತರಬೇತಿಗೂ ಅವಕಾಶ ನೀಡಲಾಗುತ್ತಿದೆ. ಸರ್ಕಾರಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ಮತ್ತು ಕಾರ್ಮಿಕರು ಉಚಿತವಾಗಿ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳಬಹುದು. ಈಗಾಗಲೇ 800 ಕ್ಕೂ ಹೆಚ್ಚು ದಾದಿಯರು ಈ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕೇಂದ್ರವು ಜರ್ಮನಿಯಲ್ಲಿ ಆರೋಗ್ಯ ವೃತ್ತಿಪರರಿಗೆ ಹೆಚ್ಚು ಬೇಡಿಕೆ ಇರುವುದರಿಂದ, ಕನಿಷ್ಠ 10,000 ಆರೋಗ್ಯ ವೃತ್ತಿಪರರನ್ನು ತರಬೇತಿ ನೀಡಿ ವಿದೇಶದಲ್ಲಿ ಉದ್ಯೋಗಕ್ಕೆ ನೆರವಾಗಲು ತಯಾರಾಗಿದೆ.
ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ಜರ್ಮನ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಹೆಲ್ತ್‌ಕೇರ್ ಪ್ರೊಫೆಷನಲ್ಸ್ (ಡಿಎಫ್‌ಎ) ಜೊತೆ ಒಪ್ಪಂದ ಮಾಡಿಕೊಂಡು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿದೆ. ಈ ಮೂಲಕ ರಾಜ್ಯದ ಯುವಕರು ವಿದೇಶಿ ಭಾಷೆಯಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ.
ಸರ್ಕಾರದ ಉಚಿತ ವಿದೇಶಿ ಭಾಷಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅದರಲ್ಲೂ ಆರೋಗ್ಯ ವೃತ್ತಿಪರರು http://nursesflt.ksdckarnataka.com ನಲ್ಲಿ ನೋಂದಾಯಿಸಿಕೊಳ್ಳಬಹುದು.