ಹೊಸದಿಗಂತ ವರದಿ ಮಡಿಕೇರಿ:
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಿಬ್ಬಂದಿ ಮೇಲೆ ಕಾಡಾನೆಯೊಂದು ದಾಳಿಗೆ ಯತ್ನಿಸಿದ ಘಟನೆ ಸಿದ್ದಾಪುರ ಸಮೀಪದ ಬಸವನಹಳ್ಳಿ ಬಳಿ ನಡೆದಿದೆ.
ಗೋಣಿಕೊಪ್ಪಲು ಪ್ರೌಢಶಾಲೆ ಅಧ್ಯಾಪಕ ಶಿವರಾಂ ಎಂಬವರೇ ಕಾಡಾನೆ ದಾಳಿಯಿಂದ ಪಾರಾದವರಾಗಿದ್ದಾರೆ.
ಶಿವರಾಂ ಅವರನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಮಾಲ್ದಾರೆ, ಅವರೆಗುಂದ, ದುಬಾರೆ ಭಾಗದಲ್ಲಿ ಸಮೀಕ್ಷೆಗೆ ನಿಯೋಜಿಸಲಾಗಿತ್ತು.
ಕರ್ತವ್ಯಕ್ಕೆಂದು ಬೈಕ್’ನಲ್ಲಿ ತೆರಳುತ್ತಿದ್ದಾಗ ಬಸವನಹಳ್ಳಿ ಬಳಿ ಕಾಡಾನೆಯೊಂದು ದಾಳಿಗೆ ಯತ್ನಿಸಿದೆ. ಭಯಗೊಂಡ ಶಿಕ್ಷಕ ಬೈಕ್’ನ್ನು ತಿರುಗಿಸುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಬೈಕ್ ಅನ್ನು ಅಲ್ಲಿಯೆ ಬಿಟ್ಟು ಓಡಿದ ಶಿವರಾಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಸ್ಥಳೀಯರು ಅವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಪ್ರವೀಣ್, ಅಮ್ಮತ್ತಿ ಕಂದಾಯ ಪರಿವೀಕ್ಷರ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ ಭೇಟಿ ನೀಡಿ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು.
ವನ್ಯ ಜೀವಿಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಸಮೀಕ್ಷೆಗೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಬೆಂಗಾವಲಿಗೆ ನಿಯೋಜಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಾತಿ ಗಣತಿಗೆ ತೆರಳುತ್ತಿದ್ದ ಶಿಕ್ಷಕನ ಮೇಲೆ ಕಾಡಾನೆ ದಾಳಿ ಯತ್ನ
