ಹೊಸದಿಗಂತ ವರದಿ, ಸೋಮವಾರಪೇಟೆ/ಮಡಿಕೇರಿ:
ಕಾಮಗಾರಿಯ ಬಿಲ್ ಮಂಜೂರು ಮಾಡಲು ಗುತ್ತಿಗೆದಾರರೊಬ್ಬರಿಂದ 25 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಹಂಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಂಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾ ಹಿರೇಶ್ ಎಂಬವರೇ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಶನಿವಾರಸಂತೆ ಹೋಬಳಿಯ ಹಂಡ್ಲಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಅನುದಾನದಡಿ 2 ಕಾಮಗಾರಿಗಳು ಹಾಗೂ ಇತರೆ 6 ಕಾಮಗಾರಿಗಳ ಗುತ್ತಿಗೆಯನ್ನು ಒಡೆಯನಪುರ ಗ್ರಾಮದ ನಿವಾಸಿ ಡಿ ದರ್ಜೆ ಗುತ್ತಿಗೆದಾರ ಎಸ್.ಎ. ಹಮೀದ್ ಎಂಬವರು ಪಡೆದಿದ್ದು, ಕಾಮಗಾರಿಗಳ ಮೇಲುಸ್ತುವಾರಿಯನ್ನು ಹುಲುಸೆ ಗ್ರಾಮದ ನಿವಾಸಿ ಭರತ್ ಎಂಬವರು ನೋಡಿಕೊಳ್ಳುತ್ತಿದ್ದರೆನ್ನಲಾಗಿದೆ.
ಕಾಮಗಾರಿಯ ಎಂ.ಬಿ ಪುಸ್ತಕವನ್ನು ಇಂಜಿನಿಯರ್ ಬರೆದಿದ್ದು, ಈ ಎಲ್ಲಾ ಕಾಮಗಾರಿಗಳ ಒಟ್ಟು ಬಿಲ್ 14,79,700 ಆಗಿದ್ದು, ಬಿಲ್ ಮಂಜೂರು ಮಾಡಿಕೊಡಲು ಪಂಚಾಯತ್ ಅಧ್ಯಕ್ಷೆ ಸುಧಾ ಹಿರೇಶ್ ಅವರು 25 ಸಾವಿರ ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಆದರೆ ಲಂಚ ನೀಡಲು ಇಚ್ಛಿಸದ ಭರತ್ ಅವರು ಈ ವಿಷಯವನ್ನು ಮಡಿಕೇರಿಯ ಲೋಕಾಯುಕ್ತ ಕಚೇರಿಗೆ ತಿಳಿಸಿದ್ದು, ಅದರಂತೆ ಅಧ್ಯಕ್ಷರು ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಭಾಷಣೆಯನ್ನು ಡಿಜಿಟಲ್ ವಾಯ್ಸ್ ರೆಕಾರ್ಡ್ ಮಾಡಿಕೊಳ್ಳುವಂತೆ ಲೊಕಾಯುಕ್ತ ಉಪ ಅಧೀಕ್ಷಕರು ಸಲಹೆ ಮಾಡಿದ್ದರು.
ಸೆ.30ರಂದು ಅಧ್ಯಕ್ಷರನ್ನು ಭೇಟಿ ಮಾಡಿದ ಭರತ್ ಅವರು ಕಾಮಗಾರಿಗಳ ಬಿಲ್’ಗಳ ಬಗ್ಗೆ ವಿಚಾರಿಸಿದಾಗ ರೂ. 25,000 ಲಂಚಕೊಟ್ಟರೆ ಚೆಕ್‌ಗೆ ಸಹಿ ಮಾಡುವುದಾಗಿ ಸುಧಾ ಹಿರೇಶ್ ತಿಳಿಸಿರುವುದನ್ನು ಭರತ್ ಧ್ವನಿಮುದ್ರಣ ಮಾಡಿಕೊಂಡು ಅಧ್ಯಕ್ಷೆಯ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಧ್ಯಕ್ಷರು ಲಂಚದ ಹಣ ಕೇಳುವಾಗ ಫೈಲ್’ನೊಳಗೆ ಹಣವನ್ನು ಇಡುವಂತೆ ಸೂಚಿಸಿದ್ದು, ಬುಧವಾರ ಪಂಚಾಯಿತಿಗೆ ತೆರಳಿ ಹಣದೊಂದಿಗೆ ಫೈಲನ್ನು ಅಧ್ಯಕ್ಷರು ಪಡೆದುಕೊಂಡಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ಲಂಚದ ಹಣದ ಸಹಿತ ಆರೋಪಿತೆ ಪಂಚಾಯಿತಿ ಅಧ್ಯಕ್ಷೆ ಸುಧಾ ಹಿರೇಶ್’ರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಅಪರ ಪೊಲೀಸ್ ಮಹಾನಿರ್ದೇಶಕ ಮನೀಶ್.ಬಿ.ಕರ್ಬಿಕರ್, ಪೊಲೀಸ್ ಮಹಾ ನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್ ಮತ್ತು ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ಅವರ ಸೂಚನೆಯಂತೆ ಪೊಲೀಸ್ ನಿರೀಕ್ಷಕ ಲೋಕೇಶ್, ವೀಣಾ ನಾಯಕ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.