ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ನೀರು ಸರಬರಾಜು ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ.
ವಿದ್ಯುತ್ ಸಂಪರ್ಕ ಸಿಗದೆ ತೊಂದರೆ ಅನುಭವಿಸುತ್ತಿರುವ ಕಟ್ಟಡದ ಮಾಲೀಕರ ಅಳಲು ಆಲಿಸಿ, ಅವರ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿ ಬಗೆಹರಿಸಲು ಸಿಎಂ ಮುಂದಾಗಿದ್ದಾರೆ.
1200 ಅಡಿಯಲ್ಲಿ ಕಟ್ಟಿರುವ ಮನೆಗೆ ಮಾತ್ರ ವಿದ್ಯುತ್, ನೀರು ಸರಬರಾಜಿಗೆ ನಿರ್ಧರಿಸಲಾಗಿದ್ದು, 30X40 ಸೈಟ್ನಲ್ಲಿ ಕಟ್ಟಿರುವ ಮನೆಗಳಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತಿಸಿದೆ.
1200 ಅಡಿಗಿಂತ ಮೇಲ್ಪಟ್ಟ ಕಟ್ಟಡಗಳಿಗೆ ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡುವ ಬಗ್ಗೆಯೂ ತೀರ್ಮಾನಿಸೋದಾಗಿ ಸಭೆಯಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಸಚಿವ ಸಂಪುಟ ಸಭೆಯಲ್ಲಿ ಆಗಬೇಕಿದೆ.
ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಜಿಬಿಎ ಅಧಿಕಾರಿಗಳು, ಇಂಧನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, 30X40ವರೆಗೆ ಅನುಮತಿ ಕೊಡಲು ತೀರ್ಮಾನ ಮಾಡಿದ್ದೇವೆ. 30X40 ಅಂದರೆ 1200 ಚ.ಮೀ.ಗೆ ಅನುಮತಿ ನೀಡಲಾಗುವುದು. ಇಂಧನ ಇಲಾಖೆಗೆ ಅನುಷ್ಠಾನಗೊಳಿಸಲು ಅಡೆತಡೆಗಳು ಇದ್ದು, ಅದನ್ನು ನಿವಾರಿಸಿ ಅನುಮತಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.