ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಬಿಪಿಎಲ್ ಕಾರ್ಡ್ ದಾರರು ಹಾಗೂ ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿ ಲೆಕ್ಕದಲ್ಲಿ ಆಹಾರ ಧಾನ್ಯಗಳ ಇಂದಿರಾ ಆಹಾರ ಕಿಟ್ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜೆ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮುಂಚೆ ಅಕ್ಕಿಯ ಅಭಾವ ಹಿನ್ನಲೆ ಫಲಾನುಭವಿಗಳ ಖಾತೆಗೆ 175 ರೂ ಜಮಾ ಮಾಡಲಾಗುತ್ತಿತ್ತು. ಅಕ್ಕಿಯ ದರ ಇಳಿಕೆ ಆದ ಬಳಿಕ ಕಳೆದ ಕೆಲ ತಿಂಗಳಿನಿಂದ ಮತ್ತೆ ಹಣದ ಬದಲಾಗಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇಂದಿರಾ ಕಿಟ್ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲು ಆಹಾರ ಧಾನ್ಯಗಳ ವಿತರಣೆ ಮುಂದಾಗಿದೆ. ಇಂದಿರಾ ಆಹಾರ ಕಿಟ್ನಲ್ಲಿ ತೊಗರಿಬೆಳೆ, ಅಡುಗೆ ಎಣ್ಣೆ, ಉಪ್ಪು ಮತ್ತು ಸಕ್ಕರೆ ವಿತರಿಸಲು ನಿರ್ಧರಿಸಲಾಗಿದೆ. ಅನ್ನಭಾಗ್ಯ ಯೋಜನೆ ಅಕ್ಕಿ ಕಳ್ಳ ಸಾಗಾಟವಾಗುತ್ತಿದ್ದ ಹಿನ್ನೆಲೆ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.