Sunday, October 12, 2025

ಅಕ್ರಮ ಶಸ್ತ್ರಾಸ್ತ್ರ ಪತ್ತೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಹೊಸ ದಿಗಂತ ವರದಿ, ಮಂಗಳೂರು:

ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾದ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪರವಾಗಿ ನಿರೀಕ್ಷಣಾ ಜಾಮೀನು ಕೋರಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸೆಶನ್ಸ್ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಧೀಶ ಬಸವರಾಜು ವಜಾಗೊಳಿಸಿದ್ದಾರೆ.

ಸೆ.27ರಿಂದ ನಿರಂತರವಾಗಿ ಮಹೇಶ್ ಶೆಟ್ಟಿ ಪರವಾಗಿ ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ವಾದ ಮಂಡಿಸಿದ್ದರು. ಸರ್ಕಾರದ ಪರವಾಗಿ ಜುಡಿತ್ ಮಸ್ಕರೇನಸ್ ಅವರು ವಾದಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ್ದ ನ್ಯಾಯಾಧೀಶರು ಅ.9ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು. ಗುರುವಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಮಾಡಿದ್ದಾರೆ. ಯಾವ ಆಧಾರದಲ್ಲಿ ಅರ್ಜಿಯನ್ನು ವಜಾ ಮಾಡಲಾಗಿದೆ ಎನ್ನುವ ಬಗ್ಗೆ ಆದೇಶದ ಪ್ರತಿಯನ್ನು ನೋಡಿಯೇ ಹೇಳಬೇಕು ಎಂದು ವಕೀಲ ದಿನೇಶ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ. ಎಸ್ಐಟಿ ಪೊಲೀಸರು ಸೆ.16ರಂದು ಮಹೇಶ್ ಶೆಟ್ಟಿ ಮನೆಯಲ್ಲಿ ಶೋಧ ನಡೆಸಿದ್ದಾಗ ಎರಡು ತಲವಾರು ಮತ್ತು ಏರ್ ಗನ್ ಪತ್ತೆಯಾಗಿತ್ತು. ಈ ಕಾರಣದಿಂದ ವಿಚಾರಣೆಗೆ ಹಾಜರಾಗಬೇಕೆಂದು ಎಸ್ಐಟಿ ನೋಟಿಸ್ ಮಾಡಿತ್ತು.

ಇನ್ನೊಂದು ಅರ್ಜಿ ವಜಾ:
ತಿಮರೋಡಿ ವಿರುದ್ಧ ಬೆಳ್ತಂಗಡಿ ತಹಶೀಲ್ದಾರ್‌ರ ಮಧ್ಯಂತರ ಬಾಂಡ್ ಆದೇಶವನ್ನು ಪ್ರಶ್ನಿಸಿದ ಅರ್ಜಿಯನ್ನೂ ದ.ಕ. ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

ಪದೇ ಪದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಪಟ್ಟಿಯಲ್ಲಿರುವ ಉಜಿರೆ ನಿವಾಸಿ ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ದಂಡಾಧಿಕಾರಿ(ತಹಶೀಲ್ದಾರ್) ಬಾಂಡ್ ನೀಡಲು ಸೂಚಿಸಿದ್ದರು. ಮೇ 18ರಂದು ಭದ್ರತಾ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿಗೆ ಬಾಂಡ್ ಕೊಡಲು ಸೂಚಿಸಲಾಗಿತ್ತು. ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗದಂತೆ 50 ಸಾವಿರ ರೂ.ಗಳ ಮಧ್ಯಂತರ ಬಾಂಡ್‌ನ್ನು ದಂಡಾಧಿಕಾರಿ ವಿಚಾರಣೆ ಮುಗಿಯುವ ವರೆಗೆ ಮುಚ್ಚಳಿಕೆ ಪತ್ರ ಬರೆಯಿಸಿ ಎಚ್ಚರಿಕೆ ನೀಡಿದ್ದರು.

ಈ ಮಧ್ಯಂತರ ಬಾಂಡ್ ಪ್ರಶ್ನಿಸಿ ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ಜೂನ್ 20 ರಂದು ಕ್ರಿಮಿನಲ್ ರಿವಿಜನ್ ಪಿಟಿಷನ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಾದ-ಪ್ರತಿವಾದ ಅಲಿಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು

error: Content is protected !!