Saturday, October 11, 2025

ತನ್ನದೇ ಸಿನಿಮಾ ದಾಖಲೆಯನ್ನು ಒಂದೇ ವಾರದಲ್ಲಿ ಮುರಿದ ‘ಕಾಂತಾರ: ಚಾಪ್ಟರ್ 1’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ ಎಂಟು ದಿನಗಳಾಗಿವೆ. ಬಾಕ್ಸ್ ಆಫೀಸ್​​ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಸಹ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿದೆ. ಸಿನಿಮಾ ಬಿಡುಗಡೆ ಆದ ಎಂಟು ದಿನಗಳಲ್ಲಿ 2022ರ ‘ಕಾಂತಾರ’ ಮತ್ತು ‘ಕೆಜಿಎಫ್ 1’ ಸಿನಿಮಾದ ಕಲೆಕ್ಷನ್ ದಾಖಲೆಗಳನ್ನು ಮುರಿದಿದೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದ ಎಂಟು ದಿನಗಳಲ್ಲಿ ಭಾರತದಲ್ಲಿ 330 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ವಾರದ ದಿನಗಳಲ್ಲಿಯೂ ಸಹ ಸಿನಿಮಾದ ಕಲೆಕ್ಷನ್​​​ನಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗಿಲ್ಲ ಎನ್ನುವುದು ವಿಶೇಷ.

ಕಳೆದ ಸೋಮವಾರದಂದು 31.5 ಕೋಟಿ, ಮಂಗಳವಾರದಂದು 33.50 ಕೋಟಿ ಗಳಿಕೆ ಮಾಡಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬುಧವಾರ ಕಲೆಕ್ಷನ್​​​ನಲ್ಲಿ ತುಸು ಕಡಿಮೆ ಆಗಿತ್ತು, 25 ಕೋಟಿ, ನಿನ್ನೆ ಗುರುವಾರದಂದು ಸಿನಿಮಾ 20.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಶುಕ್ರವಾರದಿಂದ ಮತ್ತೆ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ಸೂಚನೆಗಳಿವೆ. ವೀಕೆಂಡ್​​​ನಲ್ಲಿ ಮತ್ತೆ ಸಿನಿಮಾದ ಕಲೆಕ್ಷನ್ ಏರಿಕೆ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಂದೇ ವಾರಕ್ಕೆ 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಮತ್ತು ಕನ್ನಡದ ಮೊದಲ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 1’ ದಾಖಲೆಗಳನ್ನು ಹಿಂದಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದಲ್ಲಿ ಎಂಟು ದಿನಗಳಲ್ಲಿ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸುಮಾರು 480 ಕೋಟಿ ಗಳಿಕೆ ಮಾಡಿದೆ.

error: Content is protected !!