ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಉಮೇಶ್ ಅವರ ಸ್ಥಿತಿ ಗಂಭೀರವಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ಮನೆಯಲ್ಲಿಯೇ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ತಮ್ಮ ಕುಟುಂಬದೊಂದಿಗೆ ಅವರು ವಾಸವಾಗಿದ್ದರು. 70 ವರ್ಷದ ಉಮೇಶ್ ಅವರ ಸ್ಥಿತಿ ಸದ್ಯ ಗಂಭೀರವಾಗಿದ್ದು, ಆಂಬುಲೆನ್ಸ್ ಮೂಲಕ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅವರನ್ನು ಕುಟುಂಬಸ್ಥರು ಕರೆದುಕೊಂಡು ಬಂದಿದ್ದಾರೆ.
ಮೈಸೂರು ಶ್ರೀಕಂಠಯ್ಯ ಉಮೇಶ್, ಎಂಎಸ್ ಉಮೇಶ್ ಎಂದೇ ಕನ್ನಡ ಸಿನಿ ಜಗತ್ತಿಗೆ ಪರಿಚಿತರು. ಅಂದಾಜು 6 ದಶಕಗಳ ಕಾಲ ಸಾಕಷ್ಟು ಸಿನಿಮಾಗಳಲ್ಲಿ ವಿವಿಧ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದು, ಅವರ ಆರೋಗ್ಯ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಬಾಲ್ಯದಲ್ಲಿ ಸಾಕಷ್ಟು ರಂಗಭೂಮಿ ನಾಟಕಗಳಲ್ಲಿ ನಟಿಸಿದ್ದ ಉಮೇಶ್, 1960ರಲ್ಲಿ ಮಾಣಿಕ್ಯ ರಾಜ ಸಿನಿಮಾದ ಮೂಲಕ ಮುಖ್ಯ ಪಾತ್ರ ಮಾಡಲು ಆರಂಭಿಸಿದ್ದರು. ಇಲ್ಲಿಯವರೆಗೂ ಅವರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್, ಮುಖಭಾವ ಹಾಗೂ ಅಪರೂಪದ ಡೈಲಾಗ್ ಡೆಲಿವರಿ ಮೂಲಕ ಅವರು ಸಿನಿರಂಗದಲ್ಲಿ ಫೇಮಸ್ ಆಗಿದ್ದಾರೆ.