ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಚುನಾವಣೆಯಲ್ಲಿ ಇಂಡಿ ಕೂಟ ನೀಡಿರುವ “ಪ್ರತಿ ಮನೆಗೆ ಸರ್ಕಾರಿ ಉದ್ಯೋಗ” ಘೋಷಣೆಗೆ ಕರ್ನಾಟಕದ ಗೃಹಸಚಿವ ಡಾ. ಪರಮೇಶ್ವರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಅವಶ್ಯಕತೆ ತಿಳಿದುಕೊಂಡು ಚುನಾವಣಾ ಸಮಯದಲ್ಲಿ ಪಕ್ಷಗಳು ನೀಡುವ ವಾಗ್ದಾನಗಳು ಸಹಜ ಎಂದು ಹೇಳಿದರು.
ಜನರಿಗೆ ಏನು ಬೇಕು ಅನ್ನೋದನ್ನು ಅರಿತುಕೊಂಡು ನಾವು ಪ್ರಣಾಳಿಕೆ ರೂಪಿಸುತ್ತೇವೆ. ಎಲ್ಲ ಪಕ್ಷಗಳೂ ಇದೇ ರೀತಿಯಲ್ಲಿ ಕೆಲಸ ಮಾಡುತ್ತವೆ. ಉದ್ಯೋಗ ಎಂಬುದು ಇಂದಿನ ಕಾಲದಲ್ಲಿ ಅತ್ಯಂತ ಮುಖ್ಯ ವಿಷಯ. ದೇಶದಾದ್ಯಂತ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಯುವಕರಿಗೆ ಉದ್ಯೋಗ ಸಿಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಈ ರೀತಿಯ ಘೋಷಣೆಗಳು ಜನಮನ ಗೆಲ್ಲುವ ಪ್ರಯತ್ನವಾಗಿವೆ, ಎಂದು ಹೇಳಿದರು.
ಬಿಹಾರದಲ್ಲಿ 3 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹಂತ ಹಂತವಾಗಿ ಅದನ್ನು ಮಾಡಬಹುದು. ಒಂದೇ ದಿನದಲ್ಲಿ ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ನಾವು ಕರ್ನಾಟಕದಲ್ಲಿ 2.5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದೇವೆ. ಒಳ ಮೀಸಲಾತಿ ಸಮಸ್ಯೆ ಬಗೆಹರಿಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಪೊಲೀಸ್ ಇಲಾಖೆಯ ಜೊತೆಗೆ ಹಲವು ಇಲಾಖೆಗಳಲ್ಲೂ ನೇಮಕಾತಿ ನಡೆಯುತ್ತಿದೆ, ಎಂದು ವಿವರಿಸಿದರು.
ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಚುನಾವಣಾ ಸಮಯದಲ್ಲಿ ಹೇಳಿದ್ದಾರೆ. ಆದರೆ ಅದು ನೆರವೇರಲಿಲ್ಲ. ನಾವು 5 ಗ್ಯಾರಂಟಿ ಘೋಷಿಸಿದ್ದೆವು, ಅದನ್ನು ನಾವು ಪೂರ್ಣಗೊಳಿಸಿದ್ದೇವೆ. ಚುನಾವಣಾ ಘೋಷಣೆ ಎನ್ನುವುದು ಜನರನ್ನು ನಂಬಿಕೆ ಇಡುವ ರಾಜಕೀಯ ಕ್ರಮ. ಅದು ಖಾಲಿ ಮಾತಾಗಬಾರದು, ಎಂದು ಹೇಳಿದರು.