ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ತಂತ್ರಜ್ಞಾನ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ತೋರಿಸಿದೆ. ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯಾದ ಆಂಥ್ರಾಪಿಕ್ (Anthropic) ತನ್ನ ಮೊದಲ ಭಾರತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದೆ ಎಂದು ಕರ್ನಾಟಕದ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್‌ನಲ್ಲಿ ಘೋಷಿಸಿದ್ದಾರೆ. ಟೋಕಿಯೊ ನಂತರ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಂಸ್ಥೆಯು ಆಯ್ಕೆ ಮಾಡಿಕೊಂಡಿರುವ ಎರಡನೇ ಕಚೇರಿ ಇದೇ ಆಗಿದೆ.
ಪ್ರಿಯಾಂಕ್ ಖರ್ಗೆ ಅವರು ತಮ್ಮ ಪೋಸ್ಟ್‌ನಲ್ಲಿ, “ಬೆಂಗಳೂರು ಈಗಾಗಲೇ AI ತಂತ್ರಜ್ಞಾನಗಳ ಜಾಗತಿಕ ಕೇಂದ್ರವಾಗಿ ರೂಪುಗೊಂಡಿದೆ. ಇಲ್ಲಿನ ನವೀನತೆಯ ಪರಿಸರ ಮತ್ತು ತಾಂತ್ರಿಕ ಪ್ರತಿಭೆ ವಿಶ್ವದ ಪ್ರಮುಖ ಕಂಪನಿಗಳನ್ನು ಆಕರ್ಷಿಸುತ್ತಿದೆ,” ಎಂದು ತಿಳಿಸಿದ್ದಾರೆ. ಬೆಂಗಳೂರು AI ಸಂಶೋಧನೆ ಹಾಗೂ ಡೆವಲಪರ್ ಸಮುದಾಯಕ್ಕೆ ಬೆನ್ನೆಲುಬಾಗಿ ಬೆಳೆಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಆಂಥ್ರಾಪಿಕ್ ಕಂಪನಿ ಪ್ರಕಟಿಸಿದ ಹೇಳಿಕೆಯಲ್ಲಿ, ಬೆಂಗಳೂರನ್ನು ಆಯ್ಕೆಮಾಡಲು ಹಲವು ಕಾರಣಗಳಿವೆ ಎಂದು ತಿಳಿಸಿದೆ. ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು AI ವೃತ್ತಿಪರರು, ಅಭಿವೃದ್ಧಿ ಹೊಂದುತ್ತಿರುವ ಡೀಪ್‌ಟೆಕ್ ಪರಿಸರ ಮತ್ತು ನವೀನತೆಯ ಮನೋಭಾವ ಈ ನಿರ್ಧಾರಕ್ಕೆ ಕಾರಣವಾಗಿದೆ. ಭಾರತ ಈಗಾಗಲೇ ವಿಶ್ವದ ಐದನೇ ದೊಡ್ಡ AI ಮತ್ತು ಡೀಪ್‌ಟೆಕ್ ಪರಿಸರ ವ್ಯವಸ್ಥೆ ಹೊಂದಿದೆ. ಆಂಥ್ರಾಪಿಕ್ ಭಾರತಕ್ಕೆ ಬರುವುದರಿಂದ ಸ್ಥಳೀಯ AI ಪ್ರತಿಭೆಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ವರದಿಗಳ ಪ್ರಕಾರ, ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನೊಂದಿಗೆ ಭಾರತದಲ್ಲಿ ಸಹಯೋಗಕ್ಕಾಗಿ ಮಾತುಕತೆ ನಡೆಸುತ್ತಿದೆ. ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಡೇರಿಯೊ ಅಮೋಡೆ ಅವರು ಭಾರತಕ್ಕೆ ಭೇಟಿ ನೀಡಿ, ಮುಖೇಶ್ ಅಂಬಾನಿ ಸೇರಿದಂತೆ ಉದ್ಯಮ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಕಂಪನಿಯು 2026ರೊಳಗೆ ತನ್ನ ಕಚೇರಿಯನ್ನು ಅಧಿಕೃತವಾಗಿ ಆರಂಭಿಸುವ ಸಾಧ್ಯತೆ ಇದೆ.