ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕರುಳಿನ ಗ್ಯಾಂಗ್ರಿನ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 24 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲಾಗಿದೆ.
ಆರಂಭದಲ್ಲಿ ಹತ್ತಿರದ ಆಸ್ಪತ್ರೆಯಲ್ಲಿ ಶಂಕಿತ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯು, ಬಳಿಕ ಹಲವು ರೀತಿಯ ಸಮಸ್ಯೆಗೆ ಗುರಿಯಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಸೂಚಿಸಲಾಗಿತ್ತು, ಆದರೆ ಶಸ್ತ್ರಚಿಕಿತ್ಸೆಯ ಬಳಿಕವೂ ಸಮಸ್ಯೆ ಮುಂದುವರೆದಿತ್ತು. ಬಳಿಕ ಕೆಎಂಸಿ ಆಸ್ಪತ್ರೆಯಗೆ ಕರೆತಂದಾಗ ರೋಗಿಯ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದ್ದು ಸರ್ಜಿಕಲ್ ಗ್ಯಾಸ್ಟ್ರೊ ಎಂಟರಾಲಾಜಿಸ್ಟ್ ಡಾ. ವಿದ್ಯಾ ಎಸ್. ಭಟ್ ಹಾಗು ಲ್ಯಾಪರೊಸ್ಕೊಪಿಕ್ ಮತ್ತು ಜನರಲ್ ಸರ್ಜನ್ ಡಾ. ಅವಿನಾಶ್ ಕೃಷ್ಣ ತಂಡ ಸಮಸ್ಯೆಯನ್ನು ಗುಣಪಡಿಸಲು ಯಶಸ್ವಿಯಾಗಿದೆ.
ಏನಿದು ಕರುಳಿನ ಗ್ಯಾಂಗ್ರಿನ್ ?
ಯುವರೋಗಿಯನ್ನು ವೆಂಟಿಲೇಟರ್ ಬೆಂಬಲದೊಂದಿಗೆ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ತಪಾಸಣೆಯಲ್ಲಿ ಕರುಳಿನ ಅಸಮಾನ್ಯ ತಿರುಚುವಿಕೆಯಿಂದ ಸಣ್ಣಕರುಳಿನ ಬಹುಪಾಲು ಹಾಗೂ ದೊಡ್ಡ ಕರುಳಿನ ಕೆಲಭಾಗದಲ್ಲಿ ಗ್ಯಾಂಗ್ರಿನ್ ಉಂಟಾಗಿದ್ದು ಪತ್ತೆಯಾಗಿದೆ. ನುರಿತ ತಜ್ಞರ ತಂಡ ದೋಷಪೂರಿತ ಕರುಳಿನ ಭಾಗವನ್ನು ತೆಗೆದು ಇಂಟೆನ್ಸಿವ್ ಸಪೋರ್ಟಿವ್ ಕೇರ್ ನಲ್ಲಿ ನಿಗಾ ವಹಿಸಲಾಗಿದೆ. ಬಳಿಕ ಉಳಿದ ಆರೋಗ್ಯವಾದ ಕರುಳಿನ ಭಾಗವನ್ನು ಮರುಜೋಡಿಸಲಾಗಿದೆ.
ಮಾಲ್ರೊಟೆಶನ್ ಎಂಬುದು ಜನ್ಮಜಾತ ಕರುಳಿನ ಅಸಮಾನ್ಯ ತಿರುಚುವಿಕೆ ಆಗಿದ್ದು ಅಪರೂಪವಾದರೂ ಯುವಜನತೆಯಲ್ಲಿ ತೀವ್ರಹೊಟ್ಟೆನೋವಿನ ಜೊತೆಕಂಡುಬರುವ ಕರುಳಿನ ಸಮಸ್ಯೆಯಾಗಿದೆ.
ಈ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಗ್ಯಾಸ್ಟ್ರೊ ಎಂಟರಾಲಾಜಿಸ್ಟ್ ಡಾ. ವಿದ್ಯಾ ಎಸ್. ಭಟ್ , ಮಾಲ್ರೊಟೆಶನ್ ( ಅಸಮಾನ್ಯ ತಿರುಚುವಿಕೆ) ಯಿಂದ ಕರುಳಿನ ಗ್ಯಾಂಗ್ರಿನ್ ಉಂಟಾಗುವುದು ಬಹಳ ವಿರಳವಾದ ಪ್ರಕರಣ ಹಾಗೇ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಸಮಸ್ಯೆ. ಈ ಪ್ರಕರಣದಲ್ಲಿ ಗ್ಯಾಂಗ್ರಿನ್ ಗೆ ಒಳಗಾದ ಕರುಳಿನ ಭಾಗವನ್ನು ತೆಗೆದುಹಾಕುವುದು ಮಾತ್ರವಲ್ಲ, ಯುವ ರೋಗಿಯು ದೊಡ್ಡಪ್ರಮಾಣದ ಕರುಳಿನ ಭಾಗವನ್ನು ಕಳೆದುಕೊಂಡ ಬಳಿಕ ಚೇತರಿಕೆ ಕಾಣುವುದು ಕೂಡ ಮುಖ್ಯವಾಗಿತ್ತು. ಇಂತಹ ಪ್ರಕರಣದಲ್ಲಿ ಶೀಘ್ರ ಸಮಸ್ಯೆ ಪತ್ತೆ ಹಾಗೂ ಚಿಕಿತ್ಸೆ ಬಹಳ ಮುಖ್ಯ ಹಾಗೂ ತೀವ್ರವಾದ ಹೊಟ್ಟೆ ನೋವನ್ನು ಯಾಕೆ ಕಡೆಗಣಿಸಬಾರದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ ಎಂದರು.
ಲ್ಯಾಪರೊಸ್ಕೊಪಿಕ್ ಮತ್ತು ಜನರಲ್ ಸರ್ಜನ್ ಡಾ. ಅವಿನಾಶ್ ಕೃಷ್ಣ ಮಾತನಾಡಿ, ಕರುಳಿನ ಮಾಲ್ರೊಟೆಶನ್ (ಅಸಮಾನ್ಯತಿರುಚುವಿಕೆ) ವಿರಳವಾದರೂ , ಕರುಳಿನ ಕಾರ್ಯಕ್ಕೆ ಅಡಚಣೆಯಾಗಿ ಗ್ಯಾಂಗ್ರಿನ್ ಆಗಿ ಮುಂದುವರೆಯುವುದು ಮಾರಣಾಂತಿಕವಾಗುತ್ತದೆ. ಹೀಗಾಗಿ ಶೀಘ್ರ ಸಮಸ್ಯೆ ಪತ್ತೆಯೇ ಪರಿಹಾರವಾಗುತ್ತದೆ. ಇಂತಹ ಪ್ರಕರಣಗಳು ಶೀಘ್ರಸಮಸ್ಯೆ ಪತ್ತೆ ಹಾಗೂ ಶೀಘ್ರ ಶಸ್ತ್ರಚಿಕಿತ್ಸೆಯ ಮಹತ್ವವನ್ನು ತಿಳಿಸುತ್ತದೆ. ಶಸ್ತ್ರಚಿಕಿತ್ಸೆ ತಡವಾದಲ್ಲಿ ಕರುಳಿನ ನಷ್ಟ ಹಾಗೂ ಸಾವಿಗೂ ಕಾರಣವಾಗುತ್ತದೆ. ರೋಗಿಯು ಸಣ್ಣವಯಸ್ಸಿನವರಾದ ಕಾರಣದೀರ್ಘಾವದಿ ಯ ಪ್ಯಾರೆಂಟೆರಲ್ ನ್ಯೂಟ್ರಿಶನ್ ಮತ್ತು ಮುಂದಿನ ಬೆಳವಣಿಗೆಯ ಮೇಲೆ ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಕೆಎಂಸಿ ಆಸ್ಪತ್ರೆ ಮಂಗಳೂರು ಪ್ರಾದೇಶಿಕ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಸಘೀರ್ ಸಿದ್ಧಿಕಿ ಮಾತನಾಡಿ, ಈ ಪ್ರಕರಣವು ಅಪರೂಪದ ಮತ್ತು ಮಾರಣಾಂತಿಕ ಶಸ್ತ್ರಚಿಕಿತ್ಸೆಗಳನ್ನು,ತುರ್ತು ಸ್ಥಿತಿಗಳನ್ನುನಿರ್ವಹಿಸುವಲ್ಲಿ ನಮ್ಮ ತಂಡದ ಪರಿಣತಿಯನ್ನು ಒತ್ತಿಹೇಳುತ್ತದೆ. ನಮ್ಮ ಗಮನವು ಸರ್ಜಿಕಲ್ ಶ್ರೇಷ್ಠತೆ ಮತ್ತು ಬಹುವಿಭಾಗದ ಬೆಂಬಲದೊಂದಿಗೆ ಸಮಗ್ರ ಆರೈಕೆಯನ್ನು ನೀಡುವಲ್ಲಿ ಕೇಂದ್ರೀಕರಿಸಿದ ಎಂದು ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.